ಅಧಿಕಾರಿಗಳ ನಿರ್ಲಕ್ಷ್ಯದಿಂದ ಮದೀನಾದಲ್ಲೇ ಉಳಿದ ಕೆಲ ಹಜ್ ಯಾತ್ರಿಕರು: ಆರೋಪ

ಮದೀನಾ, ಆ.17: ಪವಿತ್ರ ಹಜ್ ಯಾತ್ರೆಗೆ ಆಗಮಿಸಿದ ಯಾತ್ರಿಕರ ಪೈಕಿ ಕೆಲ ಯಾತ್ರಿಕರನ್ನು ಮಕ್ಕಾಗೆ ಕರೆದೊಯ್ಯದೆ, ಮದೀನಾದಲ್ಲಿಯೇ ಬಿಟ್ಟುಹೋಗಲಾಗಿದೆ ಎಂದು ಆರೋಪಿಸಲಾಗಿದೆ.
ಹಜ್ಜ್ ಯಾತ್ರೆಗೆಂದು ಆಗಸ್ಟ್ 7ರಂದು ಭಾರತದಿಂದ ಬಂದ ಯಾತ್ರಿಕರಿಗೆ ತೊಂದರೆಯಾಗಿದೆ. ಮದೀನಾ ಏರ್‌ಪೋರ್ಟ್‌ನಲ್ಲಿ ಹಲವು ಗಂಟೆಗಳ ಕಾಲ ಕಾಯಿಸಲಾಗಿದೆ. ಲಾಡ್ಜ್ಗೆ ತಲುಪಿದಾಗ ನಮ್ಮೊಡನೆ ಬಂದವರಿಗೆಲ್ಲ ಒಂದು ಲಾಡ್ಜ್ ನೀಡಿದ್ದು ನಮ್ಮನ್ನು ದೂರದ ಲಾಡ್ಜೊಂದರಲ್ಲಿ ತಂಗುವಂತೆ ಮಾಡಲಾಗಿತ್ತು. ಆದರೆ ಉಳಿದ ಯಾತ್ರಿಕರನ್ನು ಮಕ್ಕಾಗೆ ಕಳುಹಿಸಿದ್ದು, ನಮ್ಮನ್ನು ಇಲ್ಲಿಯೇ ಬಿಟ್ಟಹೋಗಲಾಗಿದೆ ಎಂದು ವಿಕಲಚೇತನರಾದ ಪುತ್ತೂರು ನಿವಾಸಿ ಉಸ್ಮಾನ್ ತಿಳಿಸಿದ್ದಾರೆ.
‘‘ನಾನು ನನ್ನ ವಯಸ್ಸಾದ ತಾಯಿ ಹಜ್ ನಿರ್ವಹಿಸಲು ಇಲ್ಲಿ ಬಂದಿದ್ದು, ಸೋಮವಾರ ಮಕ್ಕಾಗೆ ತೆರಳಬೇಕಿತ್ತು. ಆದರೆ ನಮ್ಮನ್ನು ಬಿಟ್ಟು ಉಳಿದ ಯಾತ್ರಿಕರನ್ನು ಕರೆದೊಯ್ಯಲಾಗಿದೆ. ನಮಗೆ ಇಲ್ಲಿ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ನಾವು ಬೇರೆ ಲಾಡ್ಜ್‌ನಲ್ಲಿ ಎಂಬೆಸಿ ನಾವು ಇರುವುದೇ ತಿಳಿದಿಲ್ಲ. ನಮ್ಮನ್ನು ನಿರ್ಲಕ್ಷಿಸಲಾಗಿದೆ’’ ಎನ್ನುತ್ತಾರೆ ಮತ್ತೋರ್ವ ಯಾತ್ರಿಕ ಮುಹಮ್ಮದ್.
ಮಂಗಳೂರಿನಿಂದ ಎರಡನೆ ವಿಮಾನದಲ್ಲಿ ಆಗಮಿಸಿದ ಎಲ್ಲಾ ಯಾತ್ರಿಕರು ಮಕ್ಕಾಗೆ ತೆರಳಿದ್ದಾರೆ. ಆದ್ರೆ 17 ಯಾತ್ರಿಕರ ಪಾಸ್‌ಪೋರ್ಟ್ ಮಿಸ್ಸಿಂಗ್ ಎಂಬ ನೆಪ ನೀಡಿ ಮದೀನಾದಲ್ಲಿ ಬಿಟ್ಟು ಹೋಗಲಾಗಿದೆ. ಪಾಸ್‌ಪೋರ್ಟ್‌ನ್ನು ವಿಮಾನದಿಂದ ಮದೀನಾಕ್ಕೆ ಇಳಿದಾಗಲೇ ಹಜ್‌ಗೆ ಸಂಬಂಧಿಸಿದ ಅಧಿಕಾರಿಗಳು ಕೇಳೆ ಪಡೆದುಕೊಂಡಿದ್ದಾರೆ. ಅದನ್ನು ಅವರ ಕೈಗೆ ನೀಡಿದ್ದೇವೆ. ಎಂಟು ದಿನಗಳ ಬಳಿಕ ಮಕ್ಕಾಗೆ ಹೊರಟ ಎಲ್ಲರಿಗೂ ಅವರು ಪಾಸ್‌ಪೋರ್ಟ್‌ನ್ನು ನೀಡಿದ್ದಾರೆ. ಆದರೆ ನಮ್ಮ ಪಾಸ್‌ಪೋರ್ಟ್ ಕಳೆದುಹೋಗಿದೆ ಎಂದು ನಮಗೆ ಪಾಸ್‌ಪೋರ್ಟ್‌ನ್ನು ನೀಡಿಲ್ಲ. ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಹಿಳಾ ಯಾತ್ರಾರ್ಥಿಯೋರ್ವರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಇದು ಸೌದಿ ಅಧಿಕಾರಿಗಳಿಂದಾದ ಪ್ರಮಾದ ಎಂದು ಹೇಳಿದ್ದಾರೆ. ಯಾತ್ರಿಕರ ಪಾಸ್‌ಪೋರ್ಟ್‌ಗಳನ್ನು ಸೌದಿ ಅಧಿಕಾರಿಗಳು ಪಡೆದುಕೊಳ್ಳುತ್ತಾರೆ. ವಿಮಾನ ನಿಲ್ದಾಣದಲ್ಲಿ ಒಮ್ಮೆ ಯಾತ್ರಿಕರಿಗೆ ನೀಡಲಾಗುತ್ತದೆ. ಬಳಿಕ ಯಾತ್ರಿಕರು ಇವುಗಳನ್ನು ಸೌದಿ ಅಧಿಕಾರಿಗಳಿಗೆ ವಾಪಸ್ ನೀಡಬೇಕು. ಸೌದಿ ಅಧಿಕಾರಿಗಳು ಪಡೆದುಕೊಂಡ ಪಾಸ್‌ಪೋರ್ಟ್‌ಗಳ ವಿವರಗಳು ಭಾರತೀಯ ರಾಯಭಾರಿ ಕಚೇರಿಯಲ್ಲಿ ಇರುತ್ತದೆ. ಆದರೆ ನಮ್ಮ ಕೈಗೆ ಯಾವುದೇ ಪಾಸ್‌ಪೋರ್ಟ್ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.







