" ಶ್ರೀ ಶ್ರೀ ಕಾರ್ಯಕ್ರಮದಿಂದ ಯಮುನಾ ನದಿ ತಟ ಸಂಪೂರ್ಣ ನಾಶವಾಗಿದೆ "
ತಜ್ಞರ ವರದಿ

ಹೊಸದಿಲ್ಲಿ, ಆ.17: ‘‘ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಯಮುನಾ ನದಿ ತಟದಲ್ಲಿ ಆಯೋಜಿಸಿದ್ದ ಬೃಹತ್ ವಿಶ್ವ ಸಾಂಸ್ಕೃತಿಕ ಉತ್ಸವದಿಂದಾಗಿ ಯಮುನಾ ನದಿ ತಟವು ಸಂಪೂರ್ಣವಾಗಿ ನಾಶವಾಗಿದೆ’’ ಎಂದು ತಜ್ಞರ ತಂಡವೊಂದು ನ್ಯಾಶನಲ್ ಗ್ರೀನ್ ಟ್ರಿಬ್ಯೂನಲ್‌ಗೆ ಸಲ್ಲಿಸಿದ ತನ್ನ ವರದಿಯಲ್ಲಿ ತಿಳಿಸಿದೆ.
‘‘ನದಿ ತಟವು ಈಗ ಸಂಪೂರ್ಣವಾಗಿ ಸಮತಟ್ಟಾಗಿದೆ ಹಾಗೂ ಗಟ್ಟಿಯಾಗಿದೆ ಹಾಗೂ ಅಲ್ಲಿ ಯಾವುದೇ ಗಿಡ ಮರಗಳಿಲ್ಲ’’ ಎಂದು ತಂಡ ತನ್ನ 47 ಪುಟಗಳ ವರದಿಯಲ್ಲಿ ತಿಳಿಸಿದೆ.
ಈ ಮೂರು ದಿನಗಳ ಕಾರ್ಯಕ್ರಮದಿಂದ ಪರಿಸರ ವೈವಿಧ್ಯತೆಗೆ ಆದ ಹಾನಿ ಅಪಾರವೆಂದು ಹೇಳಿರುವ ತಜ್ಞರ ತಂಡ ಈ ಹಾನಿಯನ್ನು ಸರಿಪಡಿಸುವುದು ಅಸಾಧ್ಯದ ಮಾತೆಂದು ತಿಳಿಸಿದೆ.
ಮಾರ್ಚ್ ತಿಂಗಳಲ್ಲಿ ನಡೆದ ಈ ಬೃಹತ್ ಕಾರ್ಯಕ್ರಮದಿಂದ ಈ ಸೂಕ್ಷ್ಮ ಪ್ರದೇಶದ ಮೇಲಾದ ಪರಿಣಾಮವನ್ನು ತಿಳಿಯಲೆಂದೇ ಟ್ರಿಬ್ಯೂನಲ್ ಏಳು ಮಂದಿ ತಜ್ಞರ ತಂಡವನ್ನು ರಚಿಸಿತ್ತು. ಸ್ಥಳ ಪರಿಶೀಲನೆ ನಡೆಸಿದ್ದ ತಂಡವು ‘‘ಕಾರ್ಯಕ್ರಮಕ್ಕಾಗಿ ರ್ಯಾಂಪ್ ನಿರ್ಮಿಸುವ ಸಲುವಾಗಿ ಭಾರೀ ಪ್ರಮಾಣದ ಮಣ್ಣು ಹಾಗೂ ಇತರ ವಸ್ತುಗಳನ್ನು ಭೂಮಿಯ ಮೇಲೆ ಸುರಿಯಲಾಗಿತ್ತು’’ ಎಂದು ಹೇಳಿತ್ತು.
ಕುತೂಹಲಕಾರಿಯೆಂದರೆ ಕಾರ್ಯಕ್ರಮದ ನಂತರ ಪ್ರತಿಕ್ರಿಯಿಸಿದ್ದ ಶ್ರೀ ಶ್ರೀ ರವಿಶಂಕರ್, ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ತಮಗೆ ಬಹುಮಾನ ನೀಡಬೇಕೆಂದೂ, ಈ ಜಾಗ ಹಿಂದಿಗಿಂತ ಈಗ ಉತ್ತಮ ಸ್ಥಿತಿಯಲ್ಲಿದೆಯೆಂದೂ ಹೇಳಿಕೊಂಡಿದ್ದರು.
ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರಾದರೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿರಲಿಲ್ಲ. ನದಿತಟಕ್ಕೆ ಮಾಡಿದ ಹಾನಿಗಾಗಿ ಟ್ರಿಬ್ಯೂನಲ್, ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಭಾರೀ ಮೊತ್ತದ ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.







