ಬಂಡುಕೋರರರಿಗೆ ಜಾಗ ಕಲ್ಪಿಸಲು 38,000 ಕೈದಿಗಳನ್ನು ಬಿಡುಗಡೆ ಮಾಡಲಿರುವ ಟರ್ಕಿ

ಇಸ್ತಾಂಬುಲ್, ಆ.17: ಕಳೆದ ತಿಂಗಳು ದೇಶದಲ್ಲಿ ನಡೆದ ವಿಫಲ ಸೇನಾ ದಂಗೆಗೆ ಸಂಬಂಧಿಸಿದಂತೆ ಬಂಧಿತರಾದ ಸಾವಿರಾರು ಮಂದಿಗೆ ಜೈಲುಗಳಲ್ಲಿ ಜಾಗ ಕಲ್ಪಿಸುವ ಸಲುವಾಗಿ ಟರ್ಕಿ ಈಗ ಜೈಲಿನಲ್ಲಿರುವ ಸುಮಾರು 38,000 ಕೈದಿಗಳನ್ನು ಷರತ್ತುಬದ್ಧವಾಗಿ ಬಿಡುಗಡೆಗೊಳಿಸುವ ಆದೇಶವೊಂದನ್ನು ಹೊರಡಿಸಿದೆ.
ದೇಶದ ನ್ಯಾಯಾಂಗ ಸಚಿವರು ಹೊರಡಿಸಿದ ಆದೇಶವೊಂದರ ಪ್ರಕಾರ ಎರಡು ಅಥವಾ ಅದಕ್ಕಿಂತ ಕಡಿಮೆ ಜೈಲು ಶಿಕ್ಷೆ ಹೊಂದಿರುವವರು ಬಿಡುಗಡೆಯ ಭಾಗ್ಯ ಕಾಣಲಿದ್ದಾರೆ. ತಮ್ಮ ಜೈಲು ಶಿಕ್ಷೆಯ ಅರ್ಧ ಅವಧಿ ಮುಗಿಸಿದವರು ಕೂಡ ಪೆರೋಲ್‌ಗೆ ಅರ್ಹರಾಗುತ್ತಾರೆ. ಆದರೆ ಕೊಲೆ, ಕೌಟುಂಬಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಉಗ್ರವಾದ ಹಾಗೂ ದೇಶದ ಹಿತಾಸಕ್ತಿಗೆ ವಿರುದ್ಧವಾದ ಅಪರಾಧಗಳನ್ನು ಮಾಡಿ ಜೈಲು ಶಿಕ್ಷೆಗೊಳಗಾದವರನ್ನು ಈ ಆದೇಶದಿಂದ ಹೊರತುಪಡಿಸಲಾಗಿದೆ. ಜುಲೈ 1 ರ ನಂತರ ನಡೆದ ಅಪರಾಧ ಪ್ರಕರಣಗಳಿಗೂ ಈ ಆದೇಶ ಅನ್ವಯಿಸುವುದಿಲ್ಲ.
ಈ ಹೊಸ ಆದೇಶದಿಂದ ಯಾರೂ ಕೈದಿಗಳಿಗೆ ಕ್ಷಮೆ ನೀಡಲಾಗಿದೆಯೆಂದು ತಿಳಿಯುವುದು ಬೇಡ, ಇದು ಕೇವಲ ಷರತ್ತುಬದ್ಧ ಬಿಡುಗಡೆಯಷ್ಟೇ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ತಿಂಗಳ ವಿಫಲ ಕ್ಷಿಪ್ರ ಕ್ರಾಂತಿಯ ಸಂದರ್ಭ 270 ಮಂದಿ ಸಾವಿಗೀಡಾಗಿದ್ದಾರೆ. ಈ ದಂಗೆಗೆ ಸಂಬಂಧಪಟ್ಟಂತೆ ಸರಕಾರ ಈಗಾಗಲೇ 26,000 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದೆ. ಇನ್ನೂ 8,000 ಮಂದಿ ವಿಚಾರಣೆಯೆದುರಿಸುತ್ತಿದ್ದಾರೆ.
ಈ ಸೇನಾ ದಂಗೆಯ ನಂತರ ಸಾವಿರಾರು ಶಿಕ್ಷಕರು, ನ್ಯಾಯಾಧೀಶರು, ಸರಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ ಹಾಗೂ ಪತ್ರಕರ್ತರು ಹಾಗೂ ಶಿಕ್ಷಣ ತಜ್ಞರನ್ನು ಬಂಧಿಸಲಾಗಿದೆ. ಸುಮಾರು 130ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳನ್ನೂ ಮುಚ್ಚಲಾಗಿದೆ.







