ಕಾಸರಗೋಡು: ಪೊಲೀಸರನ್ನು ಕೊಲೆಗೈಯಲೆತ್ನಿಸಿದ್ದ ಆರೋಪಿಯ ಬಂಧನ

ಕಾಸರಗೋಡು, ಆ.17: ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ಪೊಲೀಸರನ್ನು ಹೊಳೆಗೆ ತಳ್ಳಿ ಕೊಲೆಗೆತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಿಯೂರಿನ ಮುಹಮ್ಮದ್ ಶಾಫಿ (40) ಎಂದು ಗುರುತಿಸಲಾಗಿದೆ. ಮುಹಮ್ಮದ್ ಶಾಫಿ ಪ್ರಕರಣದ ಐದನೆ ಆರೋಪಿಯಾಗಿದ್ದಾನೆ.
ಜುಲೈ 20 ರಂದು ತಳಂಗರೆ ಕಡವತ್ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯಂತೆ ಕರಾವಳಿ ಠಾಣಾ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ರಂಜಿತ್ ಮತ್ತು ರತೀಶ್ಚಂದ್ರನ್ ಎಂಬವರ ಮೇಲೆ ಹಲ್ಲೆ ನಡೆಸಿದ್ದ ಮರಳು ಮಾಫಿಯಾ ತಂಡವು ದೋಣಿಯಲ್ಲಿ ಅಪಹರಿಸಿ, ಹೊಳೆಗೆ ದೂಡಿ ಹಾಕಿದ್ದರು. ಬಳಿಕ ಇಬ್ಬರೂ ಈಜಿ ದಡ ಸೇರಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು.
Next Story





