ಕುವೈಟ್: ಇಂಡಿಯನ್ ಸೋಷಿಯಲ್ ಫೋರಂನಿಂದ ಸ್ವಾತಂತ್ರ್ಯ ದಿನಾಚರಣೆ

ಕುವೈಟ್, ಆ.17: ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ಚಾಪ್ಟರ್ ಇದರ ವತಿಯಿಂದ 70ನೆ ಸ್ವಾತಂತ್ರ್ಯೋತ್ಸವವನ್ನು ಸೋಮವಾರ ಕುವೈಟ್‌ನ ಸಾಲ್ಮಿಯಾ ಹಾಲಿನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಲ್ಲೆ ವಿಷನ್ ಕುವೈಟ್‌ನ ಅಧ್ಯಕ್ಷ ಸ್ಟಾನೀ ಮಾರ್ಟಿಸ್ ಮಾತನಾಡಿ, ವಿವಿಧ ಭಾಷೆ, ಧರ್ಮಗಳನ್ನೊಳಗೊಂಡ ಒಂದು ಬಹು ಸಂಸ್ಕೃತಿಯ ದೇಶ ಭಾರತ. ಈ ಸಾಮರಸ್ಯದ ಸಂಬಂಧವು ಮುರಿದು ಬೀಳದಂತೆ ರಕ್ಷಿಸಿಕೊಂಡು ಹೋಗಬೇಕಾದ ಮಹತ್ವದ ಜವಾಬ್ದಾರಿ ದೇಶವಾಸಿಗಳಾದ ನಮ್ಮೆಲ್ಲರ ಮೇಲಿದೆ ಎಂದರು. ವಿಶ್ವದಾದ್ಯಂತ ಹಿಂಸೆಯು ತಾಂಡವಾಡುತ್ತಿರುವ ಇಂದಿನ ಸನ್ನಿವೇಶದಲ್ಲಿ ನಮ್ಮ ಪೂರ್ವಿಕರು ಸ್ವಾತಂತ್ರಕ್ಕಾಗಿ ನಡೆಸಿದ ಅಹಿಂಸಾ ಚಳುವಳಿಯು ನಮಗೆ ಮಾದರಿಯಾಗಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಐಎಸ್‌ಎಫ್ ಕೇಂದ್ರ ಸಮಿತಿ ಉಪಾಧ್ಯಕ್ಷ ಅಲಾವುದ್ದೀನ್ ಅಯ್ನುಲ್ ಹಖ್ ಬಿಹಾರ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿಕೊಂಡರು.
ಮುಖ್ಯ ಭಾಷಣಗೈದ ಐಎಸ್‌ಎಫ್ ಕರ್ನಾಟಕ ಚಾಪ್ಟರ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅಹ್ಮದ್ ಅರ್ಕುಳ ಮಾತನಾಡಿ, ಸ್ವಾತಂತ್ರ್ಯ ಸಮರದ ಉದ್ದೇಶವು ನಮ್ಮ ದೇಶದಲ್ಲಿ ಬರೀ ಆಡಳಿತ ಬದಲಾಯಿಸುದಾಗಿರಲಿಲ್ಲ. ನಮ್ಮ ಬೇಕು ಬೇಡಗಳನ್ನು ನಿಯಂತ್ರಿಸುವ ಪರಕೀಯ ಶಕ್ತಿಗಳಿಂದ ಮುಕ್ತಿ ಪಡೆಯುವುದಾಗಿತ್ತು. ಪ್ರಸಕ್ತ ವಿದೇಶಿ ನೀತಿಗಳು ನಮ್ಮನ್ನು ಮತ್ತೆ ಗುಲಾಮಗಿರಿಗೆ ತಂದೊಡ್ಡುವ ಎಲ್ಲಾ ಮುನ್ಸೂಚನೆಗಳು ಗೋಚರಿಸುತ್ತಿದೆ ಎಂದರು.
ಸರ್ವ ಜಾತಿ ಜನಾಂಗಗಳ ಶಾಂತಿಯ ತೋಟವಾಗಿದ್ದ ಭಾರತ ಇಂದು ಕೆಲವೊಂದು ವಿಭಾಗೀಯ ಶಕ್ತಿಗಳಿಂದಾಗಿ ಅಪಾಯದಲ್ಲಿದೆ ಎಂದು ಎಚ್ಚರಿಸಿದರು.
ದೇಶಪ್ರೇಮ ಎನ್ನುವುದು ದೇಶವನ್ನು ಪ್ರೀತಿಸುವುದು ಮಾತ್ರವಲ್ಲದೆ, ತನ್ನ ದೇಶವಾಸಿಗಳನ್ನು ತನ್ನವರೆಂದು ಬಗೆದು ಪ್ರೀತಿಸುವುದೂ ಆಗಿದೆ ಎಂಬ ಚಾರ್ಲ್ಸ್ ಡಿಗಾಲೆಯವರ ಮಾತುಗಳನ್ನು ಉಲ್ಲೇಖಿಸಿದ ಅವರು, ಸಂವಿಧಾನ ಮತ್ತು ಅದರ ಮೌಲ್ಯಗಳ ರಕ್ಷಣೆಗಾಗಿ ಜಾತ್ಯಾತೀತ ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಒಂದಾಗಿ ಹೋರಾಡುವುದು ಕಾಲದ ಬೇಡಿಕೆಯಾಗಿದೆ ಎಂದು ಕರೆ ನೀಡಿದರು.
ಕುವೈಟ್-ಮಣಿಪುರ ಅಸೋಸಿಯೇಶನ್ ಅಧ್ಯಕ್ಷ ಸೈಯದ್ ಬ್ಯಾರಿ, ಕೆಐಎಫ್‌ಎಫ್ ಕರ್ನಾಟಕ ಚಾಪ್ಟರ್‌ನ ಅಧ್ಯಕ್ಷ ಮುಸ್ತಕೀಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐಎಸ್‌ಎಫ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ರಫೀಕ್ ಮಂಚಿ ಸ್ವಾಗತಿಸಿದರು. ತಂಝೀಲ್ ಕಲ್ಲಾಪು ವಂದಿಸಿದರು. ತಮೀಮ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.







