ಪುತ್ತೂರು: ಅಂಗನವಾಡಿ ಕಟ್ಟಡದ ಕಾಮಗಾರಿ ಕಳಪೆ: ಎಸಿಬಿಗೆ ದೂರು ಸಲ್ಲಿಕೆ

ಪುತ್ತೂರು, ಆ.17: ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲಾರ್ ಎಂಬಲ್ಲಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಕುರಿಯ ಗ್ರಾಮದ ಮಲಾರ್ ನಿವಾಸಿ ಪ್ರೀತಂ ಡಿಸೋಜ ಎಂಬವರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
ಮಲಾರ್ ಎಂಬಲ್ಲಿ ಎರಡು ಇಲಾಖೆಗಳ ಅನುದಾನದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕಟ್ಟಡದ ಅಡಿಪಾಯ ಭದ್ರವಾಗಿಲ್ಲ.ಕಳಪೆ ಗುಣಮಟ್ಟದ ಕಲ್ಲು ಹಾಸಿ ಅಡಿ ಬಾಗವನ್ನು ಮಣ್ಣಿನಿಂದ ಮುಚ್ಚಲಾಗಿದೆ. ಬೋಗಸ್ ಕೆಲಸ ನಡೆಸಿ ಅವ್ಯವಹಾರ ನಡೆಸುವ ಕಾಮಗಾರಿ ಇದಾಗುತ್ತದೆ. ಈ ಕಾಮಗಾರಿಗೆ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದ ಅನುದಾನವಿದ್ದರೂ ಗ್ರಾಮದ ಜನತೆಗೆ ಉದ್ಯೋಗ ನೀಡದೆ ಹೊಗಿನವರಲ್ಲಿ ಕೆಲಸ ಮಾಡಿಸಲಾಗಿದೆ. ಕಾಮಗಾರಿಯನ್ನು ಪಂಚಾಯತ್ ಸದಸ್ಯರೊಬ್ಬರು ನಿರ್ವಹಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಂಗನವಾಡಿ ಪುಟಾಣಿಗಳ ಹಿತದೃಷ್ಟಿಯಿಂದ ಮತ್ತು ದೊಡ್ಡ ಮೊತ್ತದ ಸರಕಾರಿ ಅನುದಾನ ಇದಾಗಿರುವುದರಿಂದ ಈ ಕಳಪೆ ಗುಣಮಟ್ಟದ ಕಾಮಗಾರಿಗೆ ನಮ್ಮ ಆಕ್ಷೇಪವಿದ್ದು, ಈ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದರೂ ಈ ತನಕ ಯಾವುದೇ ಕ್ರಮಕೈಗೊಂಡಿಲ್ಲ. ಸಂಬಂಧಪಟ್ಟ ಇಂಜಿನಿಯರ್‌ಗೆ ದೂರು ನೀಡಿದ್ದರೂ ಅವರು ನಿರ್ಲಕ್ಷ ವಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಅಂಗನವಾಡಿ ಕಟ್ಟಡ ಕಾಮಗಾರಿಗೆ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 4 ಲಕ್ಷ ರೂ. ಮತ್ತು ಆರ್‌ಐಡಿಎಫ್ ಯೋಜನೆಯ ಮೂಲಕ 9.15ಲಕ್ಷ ರೂ. ಅನುದಾನವಿರುವ ಮಾಹಿತಿ ಇದೆ. ಆದ್ದರಿಂದ ಪ್ರಗತಿಯಲ್ಲಿರುವ ಈ ಕಳಪೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ನ್ಯಾಯಬದ್ಧವಾಗಿ ಕಾಮಗಾರಿ ನಡೆಸಬೇಕು. ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.







