ರಿಯೋ: ಓಟದಲ್ಲಿ ಬಿದ್ದರೂ ಫೈನಲ್ ಗೆ ತಲುಪಿದರು!

ರಿಯೋ ಡಿ ಜನೈರೊ, ಆ.17: ರಿಯೋ ಒಲಿಂಪಿಕ್ಸ್‌ನ ಮಹಿಳೆಯರ 5000 ಮೀ. ಓಟದ ವೇಳೆ ಪರಸ್ಪರ ಡಿಕ್ಕಿಯಾದ ಬಳಿಕ ಕ್ರೀಡಾಸ್ಫೂರ್ತಿ ಮೆರೆದಿದ್ದ ದೂರದ ಓಟಗಾರ್ತಿಯರಾದ ಅಮೆರಿಕದ ಅಬೆ ಡಿ’ ಅಗೊಸ್ಟಿನೊ ಹಾಗೂ ನ್ಯೂಝಿಲೆಂಡ್‌ನ ನಿಕ್ಕಿ ಹ್ಯಾಂಬ್ಲಿನ್ ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.
ಈ ಇಬ್ಬರು ಫೈನಲ್‌ನಲ್ಲಿ ಪದಕ ಗೆಲ್ಲುವ ಫೇವರಿಟ್ ಓಟಗಾರ್ತಿಯರಲ್ಲದಿದ್ದರೂ ಮೈದಾನದಲ್ಲಿ ತಾವು ಪ್ರದರ್ಶಿಸಿದ ಕ್ರೀಡಾಸ್ಫೂರ್ತಿಗೆ ಸಾರ್ವಜನಿಕರಿಂದ ವಿಶೇಷವಾಗಿ ಗುರುತಿಸಲ್ಪಟ್ಟಿದ್ದಾರೆ.
ರೇಸ್‌ನ 3,200 ಮೀ. ಕ್ರಮಿಸಿದಾಗ ಹ್ಯಾಂಬ್ಲಿನ್ ಸಹ ಓಟಗಾರ್ತಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಓಟದ ವೇಗವನ್ನು ತಗ್ಗಿಸಿದರು. ಆಗ ಅಗೊಸ್ಟಿನೊ ಅವರು ಹ್ಯಾಂಬ್ಲಿನ್‌ಗೆ ಹಿಂಬದಿಯಿಂದ ಡಿಕ್ಕಿಯಾದಾಗ ಇಬ್ಬರು ಟ್ರಾಕ್‌ನ ಮೇಲೆ ಉರುಳಿ ಬಿದ್ದರು.
ತಕ್ಷಣವೇ ಎದ್ದುನಿಂತ ಡಿ’ ಅಗೊಸ್ಟಿನೊ ಓಟವನ್ನು ಮುಂದುವರಿಸದೇ ಟ್ರಾಕ್‌ನಲ್ಲಿ ಉರುಳಿಬಿದ್ದಿದ್ದ ಹ್ಯಾಂಬ್ಲಿನ್ ಕೈಹಿಡಿದು ಎಬ್ಬಿಸಿದರು. ಇಬ್ಬರು ಒಟ್ಟಿಗೆ ಓಟವನ್ನು ಮುಂದುವರಿಸಲು ನಿರ್ಧರಿಸಿದರು. ಒಂದು ಹಂತದಲ್ಲಿ ಅಗಾಸ್ಟಿನೊಗೆ ಕಾಲು ನೋವು ಕಾಣಿಸಿಕೊಂಡು ಓಟವನ್ನು ಮುಂದುವರಿಸಲು ಹಿಂದೇಟು ಹಾಕಿದರು. ಆಗ ಹ್ಯಾಂಬ್ಲಿನ್ ಅವರನ್ನು ಹುರಿದುಂಬಿಸಿದರು. ಓಟ ಪೂರ್ಣಗೊಳಿಸಿದ ಅಗೊಸ್ಟಿನೊ 17:10.02 ಸೆಕೆಂಡ್‌ನಲ್ಲಿ ಗುರಿ ತಲುಪಿ 16ನೆ ಸ್ಥಾನ ಪಡೆದರೆ, 16:43.61 ಸೆಕೆಂಡ್‌ನಲ್ಲಿ ಗುರಿ ತಲುಪಿದ ಹ್ಯಾಂಬ್ಲಿನ್ 15ನೆ ಸ್ಥಾನ ಪಡೆದರು. ಓಟದ ವೇಳೆ ಪರಸ್ಪರ ಡಿಕ್ಕಿಯಾಗಿ ತೊಂದರೆ ಅನುಭವಿಸಿದ್ದ ಡಿ’ಅಗೊಸ್ಟಿನೊ, ಹ್ಯಾಂಬ್ಲಿನ್ ಹಾಗೂ ಇನ್ನೋರ್ವ ಓಟಗಾರ್ತಿ ಆಸ್ಟ್ರೀಯದ ಜೆನ್ನಿಫೆರ್ ವೆಂಥ್‌ಗೆ ಪ್ರತಿಭಟನೆಯ ಹಿನ್ನೆಲೆಯಲ್ಲಿ 5000 ಮೀ. ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಯಿತು. ಫೈನಲ್ ಪಂದ್ಯ ಶುಕ್ರವಾರ ನಡೆಯಲಿದೆ. ಫೈನಲ್‌ನಲ್ಲಿ ಒಟ್ಟು 18 ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ.
Por su gran gesto olímpico, Nikki Hamblin y Abbey D'Agostino fueron recalificadas por los jueces y avanzaron pic.twitter.com/nTk0yHTPpP
— Sebastián Amaya (@sebaamaya) August 16, 2016







