ಪುತ್ತೂರು: ಇನ್ನೋರ್ವ ಬಜರಂಗದಳದ ಕಾರ್ಯಕರ್ತನ ಬಂಧನ
ಕೆಎಸ್ಸಾರ್ಟಿಸಿ ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣ

ಪುತ್ತೂರು, ಆ.17: ಕಳೆದ 9 ತಿಂಗಳ ಹಿಂದೆ ನಗರದ ನೆಲ್ಲಿಕಟ್ಟೆ ಖಾಸಗಿ ಬಸ್ಸು ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಕೆಎಸ್ಸಾರ್ಟಿಸಿ ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳದ ಕಾರ್ಯಕರ್ತನಾದ ಇನ್ನೋರ್ವ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಬನ್ನೂರು ನೆಕ್ಕಿಲ ನಿವಾಸಿ ರಘುನಾಥ ಶೆಟ್ಟಿ ಎಂಬವರ ಪುತ್ರ ಪ್ರಜ್ವಲ್(27) ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ರಮೇಶ್ ಪೂಜಾರಿ ಎಂಬವರ ಪುತ್ರ ಜಯಂತ್(25) ಎಂಬಾತನನ್ನು ಪೊಲೀಸರು ಆ.5ರಂದು ಬಂಧಿಸಿದ್ದರು. ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಬಂಧಿತ ಆರೋಪಿ ಕ್ರಿಮಿನಲ್ ಚಟುವಟಿಯ ಹಿನ್ನಲೆಯನ್ನು ಹೊಂದಿದ್ದಾನೆ ಎನ್ನಲಾಗಿದ್ದು, ಸುಳ್ಯ ತಾಲೂಕಿನ ಉಬರಡ್ಕ ಎಂಬಲ್ಲಿ ದಾರಿ ವಿವಾದವೊಂದಕ್ಕೆ ಸಂಬಂಧಿಸಿ ನಡೆಸಲಾಗಿದ್ದ ಕೊಲೆಯತ್ನ ಪ್ರಕರಣದ ಆರೋಪಿಯಾಗಿದ್ದು, ಈ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ. ಮಂಗಳೂರು ಜೈಲ್‌ನಿಂದ ಹೊರಬರುತ್ತಿದ್ದಂತೆ ಪುತ್ತೂರು ಪೊಲೀಸರು ಆರೋಪಿ ಪ್ರಜ್ವಲ್‌ನನ್ನು ಬಂಧಿಸಿದ್ದಾರೆ. ಇದೀಗ ಆತನನ್ನು ಮತ್ತೆ ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಬುಧವಾರ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಗುರುವಾರ ಜಯಂತ್‌ನ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದ್ದು, ಇದೇ ಹೊತ್ತಿಗೆ ಪ್ರಜ್ವಲ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದು ಬಂದಿದೆ. ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದ ಪ್ರಜ್ವಲ್ ಬನ್ನೂರಿನ ನೆಕ್ಕಿಲ ನಿವಾಸಿ. ಟಿಪ್ಪುಜಯಂತಿಯ ದಿನವಾದ 2015ರ ನವೆಂಬರ್ 12ರಂದು ರಾತ್ರಿ ಪುತ್ತೂರು ಖಾಸಗಿ ಬಸ್‌ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಸಾರ್ಟಿಸಿ ಬಸ್‌ಗೆ ಬೆಂಕಿ ಹಚ್ಚಲಾಗಿತ್ತು. ಟಿಪ್ಪುಜಯಂತಿ ಆಚರಣೆಯ ದಿನ ಮಡಿಕೇರಿಯಲ್ಲಿ ಹತ್ಯೆ ನಡೆದಿತ್ತು. ಮರುದಿನ ದ.ಕ. ಜಿಲ್ಲಾ ಬಂದ್‌ಗೆ ಕರೆ ನೀಡಿದ್ದು, ಅದೇ ದಿನ ರಾತ್ರಿ ಪುತ್ತೂರು ಖಾಸಗಿ ಬಸ್‌ನಿಲ್ದಾಣದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ಗೆ ಬೆಂಕಿ ಹಚ್ಚಲಾಗಿತ್ತು.
ರಾತ್ರಿ 8 ಗಂಟೆ ಸುಮಾರಿಗೆ ದರ್ಬೆಯ ಬಾರ್‌ನಲ್ಲಿ ಕುಡಿದು, ಪುತ್ತೂರು ದೇವಳದ ಗದ್ದೆಯಲ್ಲಿ ಬೈಕ್ ನಿಲ್ಲಿಸಿ, ಪೆಟ್ರೋಲ್ ತಂದು, ಬಳಿಕ ಬಸ್‌ನಿಲ್ದಾಣದ ಆವರಣ ಗೋಡೆ ಹೊರಗಡೆ ಬೈಕ್ ನಿಲ್ಲಿಸಿ, ಬಸ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಈ ಹಿಂದೆ ಬಂಧಿತನಾದ ಜಯಂತ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದ.







