ರವಿಶಂಕರ್ ಗುರೂಜಿಯ ವಿಶ್ವ ಸಂಸ್ಕೃತಿ ಉತ್ಸವದಿಂದ ಯಮುನಾ ದಂಡೆ ಸಂಪೂರ್ಣ ನಾಶ
ಪರಿಣತರ ಸಮಿತಿ
ಹೊಸದಿಲ್ಲಿ, ಆ.17: ರವಿಶಂಕರ್ ಗುರೂಜಿಯ ಆರ್ಟ್ ಆಫ್ ಲಿವಿಂಗ್ ದಿಲ್ಲಿಯ ಯಮುನಾ ದಂಡೆಯಲ್ಲಿ ನಡೆಸಿದ್ದ ‘ವಿಶ್ವ ಸಂಸ್ಕೃತಿ ಉತ್ಸವದಿಂದ’ ನದಿಯ ಪಾತ್ರವು ‘ಕೇವಲ ಹಾನಿಗೊಂಡಿರುವುದಷ್ಟೇ ಅಲ್ಲ. ಅದು ಸಂಪೂರ್ಣ ನಾಶವಾಗಿದೆಯೆಂದು ಪರಿಣತರ ಗುಂಪೊಂದು ದೇಶದ ಅತ್ಯುನ್ನತ ಪರಿಸರ ನ್ಯಾಯಾಲಯಕ್ಕೆ ಹೇಳಿದೆ.
ಹಾನಿಯ ವೌಲ್ಯವನ್ನು ಅಂದಾಜಿಸಿ 45 ದಿನದೊಳಗಾಗಿ ವರದಿ ನೀಡುವಂತೆ ಪರಿಣತರ ತಂಡಕ್ಕೆ ನ್ಯಾಯಾಲಕ್ಕೆ ಸೂಚಿಸಿತ್ತು. ಆದರೆ, ಆ ಕೆಲಸ ಅತ್ಯಂತ ಕಠಿಣವಾದುದೆಂದು ಅದು ತಿಳಿಸಿದೆ.
ನೆಲವು ಸಂಪೂರ್ಣವಾಗಿ ಸಮತಟ್ಟಾಗಿದೆ, ಜಡಿದಿದೆ ಹಾಗೂ ಗಟ್ಟಿಯಾಗಿದೆ. ಅದರಲ್ಲಿ ಜಲ ಮೂಲಗಳಾಗಲಿ, ಹೊಂಡಗಳಾಗಲಿ ಇಲ್ಲ ಹಾಗೂ ಹೆಚ್ಚುಕಮ್ಮಿ ಸಂಪೂರ್ಣ ಸಸ್ಯ ಸಂಕುಲ ನಾಶವಾಗಿದೆಯೆಂದು ತನ್ನ 47 ಪುಟಗಳ ವರದಿಯಲ್ಲಿ ತಂಡ ಹೇಳಿದೆ.
ನೆರೆ ಬಯಲು ಮರಗಳು, ಪೊದೆಗಳು, ಎತ್ತರದ ಹುಲ್ಲು ಹಾಗೂ ವಿಶಾಲ ಜೀವರಾಶಿಯ ಉಳಿವಿಗೆ ಅಗತ್ಯವಿರುವ ಜಲ ಸಸ್ಯಗಳು ಸಹಿತ ಸ್ವಾಭಾವಿಕ ಸಸ್ಯವರ್ಗ ನಷ್ಟವಾಗಿದೆ. ಈ ಜೀವಿಗಳೆಲ್ಲ ನೆಲೆ ಕಳೆದುಕೊಂಡಿವೆ. ತೀವ್ರ ಚಟುವಟಿಕೆಯಿಂದ ದೂರ ನೂಕಲ್ಪಟ್ಟಿವೆ. ಅನೇಕ ಜೀವಿಗಳು ಅವಶೇಷಗಳಡಿ ಸಮಾಧಿಯಾಗಿವೆ. ಇದು ಜೀವ ವೈವಿಧ್ಯದ ಕಣ್ಣಿಗೆ ಬಾರದ ನಷ್ಟವಾಗಿದ್ದು, ಅದನ್ನು ಸುಲಭವಾಗಿ ಅಂದಾಜಿಸಲು ಸಾಧ್ಯವಿಲ್ಲ. ಅಲ್ಲದೆ, ಹೆಚ್ಚಿನವು ಮರಳಿ ಬರಲಾರವೆಂದು ಅದು ಆರೋಪಿಸಿದೆ.
ಆರ್ಟ್ ಆಫ್ ಲಿವಿಂಗ್ ಪ್ರದೇಶವನ್ನು ಪುನಃ ಸ್ಥಾಪಿಸುವ ವೆಚ್ಚವನ್ನು ಹೊರಬೇಕು ಎಂದಿರುವ ಪರಿಣತರ ತಂಡ, ಪರಿಸರಕ್ಕಾದ ಹಾನಿಯ ವೌಲ್ಯವನ್ನು ಅಂದಾಜಿಸುವುದು ಅತ್ಯಂತ ಕಷ್ಟದ ವಿಷಯವೆಂದು ಹೇಳಿದೆ.
ನದಿ ಪಾತ್ರದ ಭೂ ದೃಶ್ಯವೇ ಬದಲಾಗಿದೆ. ರ್ಯಾಂಪ್ ಹಾಗೂ ರಸ್ತೆಗಳ ನಿರ್ಮಾಣ, ಜಲಮೂಲಗಳ ತುಂಬು ವಿಕೆ ಹಾಗೂ ನೆಲ ಸಮತಟ್ಟುಗೊಳಿಸುವಿಕೆಯು ಸ್ಥಳದ ಸಂಪೂರ್ಣ ಭೌತಿಕ ಸ್ವರೂಪ ಹಾಗೂ ಜೀವಿಗಳ ಇರು ವಿಕೆಯನ್ನೇ ನಾಶಗೊಳಿಸಿದೆಯೆಂದು ತಂಡ ತಿಳಿಸಿದೆ.
ಮಾರ್ಚ್‌ನಲ್ಲಿ ರೂ.5 ಕೋಟಿ ಪರಿಸರ ಹಾನಿ ಪರಿಹಾರ ಪಾವತಿಸುವ ಶರ್ತದೊಡನೆ ಅನುಮತಿಸಲಾಗಿದ್ದ ವಿಶ್ವ ಸಂಸ್ಕೃತಿ ಉತ್ಸವದಿಂದ ಪರಿಸರದ ಮೇಲಾದ ಪರಿಣಾಮವನ್ನು ಅಂದಾಜಿಸಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು 7 ಮಂದಿ ಪರಿಣತರನ್ನು ನೇಮಿಸಿತ್ತು.





