ಫೆಬ್ರವರಿಯಲ್ಲಿ ಉ.ಪ್ರ. ವಿಧಾನಸಭಾ ಚುನಾವಣೆ ನಡೆಸಲು ಮಾಯಾವತಿ ಆಗ್ರಹ
ಹೊಸದಿಲ್ಲಿ,ಆ.17: ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬದಲ್ಲಿನ ಆಂತರಿಕ ಕಚ್ಚಾಟವು ಎಸ್ಪಿ ಸರಕಾರದ ಕಾರ್ಯ ನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ ಎಂದು ಬುಧವಾರ ಇಲ್ಲಿ ಆರೋಪಿಸಿದ ಬಿಎಸ್ಪಿ ಮಖ್ಯಸ್ಥೆ ಮಾಯಾವತಿಯವರು, ಫೆಬ್ರವರಿಯೊಳಗೆ ರಾಜ್ಯ ವಿಧಾನಸಭೆಗೆ ಚುನಾವಣೆಯನ್ನು ನಡೆಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದರು.
ಬಿಜೆಪಿ ಮತ್ತು ಎಸ್ಪಿ ಚುನಾವಣೆಯನ್ನು ವಿಳಂಬಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿ ಸಿದ ಅವರು, ಆಯೋಗವು ಚುನಾವಣಾ ವೇಳಾಪಟ್ಟಿ ರೂಪಿ ಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಮತ್ತು ಸಾರ್ವಜನಿಕ ಹಿತಾ ಸಕ್ತಿಯ ದೃಷ್ಟಿಯಿಂದ ಜನವರಿ-ಫೆಬ್ರವರಿಯಲ್ಲಿ ಚುನಾವಣೆಯನ್ನು ಪ್ರಕಟಿಸಬೇಕು ಎಂದರು.
ರಾಜ್ಯದಲ್ಲಿಯ ಪ್ರಚಲಿತ ಸ್ಥಿತಿಯ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರವು ರಾಷ್ಟ್ರಪತಿ ಆಡಳಿತ ಹೇರಲು ಸಜ್ಜಾಗಿರಬೇಕಾಗಿತ್ತು. ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಕಳಪೆ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರಪತಿ ಆಡಳಿತವನ್ನು ಹೇರುವ ಧೈರ್ಯ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ನುಡಿದರು.
ಆಡಳಿತ ಎಸ್ಪಿಯಲ್ಲಿ ಬಿರುಕುಗಳು ದೊಡ್ಡ ದಾಗುತ್ತಿರುವುದು ಈ ವಾರದ ಆದಿಯಲ್ಲಿ ಬಹಿರಂಗಗೊಂಡಿತ್ತು. ಸೋಮವಾರ ಲಕ್ನೋದಲ್ಲಿ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರು, ತನ್ನ ಸೋದರ ಶಿವಪಾಲ್ ಯಾದವ್‌ರನ್ನು ಕಡೆಗಣಿಸುತ್ತಿರುವುದಕ್ಕಾಗಿ ತನ್ನ ಪುತ್ರ ಹಾಗೂ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದರು.





