ಬಿಹಾರ: 13 ಮಂದಿಯ ನಿಗೂಢ ಸಾವು; ಕಳ್ಳಭಟ್ಟಿ ಸೇವನೆ ಶಂಕೆ
ಪಾಟ್ನಾ, ಆ.17: ಬಿಹಾರದ ಖಜುರ್ಬಾರಿ ಗ್ರಾಮದ ಹರ್ಕುವಾ ಬ್ಲಾಕ್‌ನಿಂದ ನಿಗೂಢ ಸಾವುಗಳ ಕುರಿತು ವರದಿಯಾಗಿದೆ. 7 ಮಂದಿ ಮಂಗಳವಾರ ಸಂಜೆ ಅಸು ನೀಗಿದ್ದರೆ, ಗಂಭೀರಾವಸ್ಥೆಯಲ್ಲಿದ್ದರೆನ್ನಲಾದ ಇತರ 6 ಮಂದಿ ಬುಧವಾರ ನಸುಕಿನ ವೇಳೆ ಮೃತರಾಗಿದ್ದಾರೆ.
ಮೃತರು ಕಳ್ಳಭಟ್ಟಿ ಸಾರಾಯಿ ಸೇವಿಸಿದ್ದರೆಂದು ಅವರ ಕುಟುಂಬಗಳು ಆರೋಪಿಸಿವೆ
ನಕಲಿ ಶರಾಬು ಕುಡಿದ ಬಳಿಕ ಅವರಿಗೆ ಹೊಟ್ಟೆನೋವು ಆರಂಭವಾಗಿತ್ತು ಹಾಗೂ ವಾಂತಿ ಮಾಡುತ್ತಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ. ಅಸ್ವಸ್ಥರನ್ನು ಕೂಡಲೇ ಸ್ಥಳೀಯ ಹಾಗೂ ನೆರೆಯ ಉತ್ತರಪ್ರದೇಶದ ಗೋರಖ್‌ಪುರದ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.
ಆದಾಗ್ಯೂ, ಕಳ್ಳಭಟ್ಟಿಯಿಂದಾಗಿ ಸಾವುಗಳಾಗಿವೆಯೆಂಬು ದನ್ನು ಜಿಲ್ಲಾಡಳಿತ ನಿರಾಕರಿಸಿದ್ದು, ತನಿಖೆಗೆ ಆದೇಶಿಸಿದೆ.
ಮೃತರ ರಕ್ತದ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದೇವೆ. ತಾವು ಮರಣೋತ್ತರ ಪರೀಕ್ಷಾ ವರದಿಗಳನ್ನು ಕಾಯುತ್ತಿದ್ದೇವೆ. ವರದಿಗಳು ದೊರೆಯದೆ ಸಾವಿನ ಕಾರಣ ಖಚಿತಪಡಿಸಲು ಸಾಧ್ಯವಿಲ್ಲವೆಂದು ಗೋಪಾಲ್‌ಗಂಜ್‌ನ ಜಿಲ್ಲಾ ದಂಡಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳ ಎಲ್ಲ ಪ್ರಕರಣಗಳನ್ನು ಆಸ್ಪತ್ರೆಗೆ ವರದಿ ಮಾಡಲಾಗಿದೆಯೆಂದು ಅವರು ಹೇಳಿದ್ದಾರೆ.
ಒಬ್ಬನ ಸಾವು ಸಲ್ಫಸ್ ಮಾತ್ರೆ ತಿಂದ ಬಳಿಕ ಸಂಭವಿಸಿದೆ. ಇನ್ನೊಬ್ಬ ವ್ಯಕ್ತಿಗೆ ಕಂಪವಾತವಿತ್ತೆಂದು ಜಿಲ್ಲಾಡಳಿತ ಪ್ರತಿಪಾದಿಸಿವೆ.
ಎ.5ರಂದು ಬಿಹಾರದಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಗೊಳಿಸಿದ ಬಳಿಕ, ಇದು 15 ದಿನಗಳಲ್ಲಿ ಸಂಭವಿಸಿದ ಇಂತಹ ಮೂರನೆ ಪ್ರಕರಣವಾಗಿದೆ.





