ಕಾಶ್ಮೀರ ನಮ್ಮದೆನ್ನುವುದು ದೇಶದ್ರೋಹವೇ?

ಬೆಂಗಳೂರಿನ ಥಿಯಾಲಾಜಿಕಲ್ ಕಾಲೇಜು ಸಭಾಂಗಣದಲ್ಲಿ ‘ಸಂತ್ರಸ್ತ ಕಾಶ್ಮೀರಿ’ಗಳ ಕುರಿತಂತೆ ಹಮ್ಮಿಕೊಂಡ ಆಮ್ನೆಸ್ಟಿ ಹಮ್ಮಿಕೊಂಡ ಕಾರ್ಯಕ್ರಮ ಇದೀಗ ದೇಶಾದ್ಯಂತ ಸುದ್ದಿಯಾಗುತ್ತಿದೆ. ಒಂದೆಡೆ ಭಾರತ ಸರಕಾರ ಕಾಶ್ಮೀರ ತನ್ನದು ಎಂದು ಘಂಟಾಘೋಷವಾಗಿ ಕೂಗುತ್ತಿದೆ. ಮಗದೊಂದೆಡೆ ಅದೇ ಕಾಶ್ಮೀರಿಗಳ ನೋವು ದುಮ್ಮಾನಗಳನ್ನು ನಾವು ಚರ್ಚೆ ಮಾಡಲು ತೊಡಗಿದಾಕ್ಷಣ ‘ಬಾಯಿ ಮುಚ್ಚು’ ಎನ್ನುತ್ತದೆ. ತಕ್ಷಣ ಅಲ್ಲಿಗೆ ಪೊಲೀಸರು ಆಗಮಿಸುತ್ತಾರೆ. ಕಾಶ್ಮೀರಿಗಳ ಪರವಾಗಿ ಮಾತನಾಡಿದವರನ್ನು ‘ದೇಶದ್ರೋಹಿಗಳು’ ಎಂದು ಕರೆದು ಅವರನ್ನು ಜೈಲಿಗೆ ತಳ್ಳಲು ಪೊಲೀಸರು ಅತ್ಯುತ್ಸಾಹ ವ್ಯಕ್ತಪಡಿಸುತ್ತಾರೆ. ಬೆಂಗಳೂರಿನಲ್ಲಿಯೂ ಇದೇ ನಡೆದಿದೆ. ಬೀದಿಯಲ್ಲಿ ನಿಂತು ‘ಕಾಶ್ಮೀರ ನಮ್ಮದು’ ಎಂದು ಕೂಗಿದರೆ ನಾವು ದೇಶಪ್ರೇಮಿಗಳು. ಅದೇ ಸಂದರ್ಭದಲ್ಲಿ ‘ಕಾಶ್ಮೀರಿಗಳೂ ನಮ್ಮವರು’ ಎಂದರೆ ನಾವು ದೇಶದ್ರೋಹಿಗಳು. ಕೆಲವು ಸ್ವಯಂಘೋಷಿತ ದೇಶಪ್ರೇಮಿ ಗುತ್ತಿಗೆದಾರರು ಇಂದು ಕಾಶ್ಮೀರದ ಕುರಿತಂತೆ ಏನನ್ನು ಮಾತನಾಡಬೇಕು, ಏನನ್ನು ಮಾತನಾಡಬಾರದು ಎನ್ನುವುದನ್ನು ತೀರ್ಮಾನಿಸುತ್ತಿದ್ದಾರೆ.
ಇವರೂ ನಕಲಿ ಗೋರಕ್ಷಕರಂತೆಯೇ ನಕಲಿ ದೇಶಭಕ್ತರು. ಹೇಗೆ ನಕಲಿ ಗೋರಕ್ಷಕರ ಜೊತೆಗೆ ನಮ್ಮ ಪೊಲೀಸ್ ಇಲಾಖೆ ಶಾಮೀಲಾಗಿದೆಯೋ ಹಾಗೆಯೇ ಈ ನಕಲಿ ದೇಶಭಕ್ತರ ಜೊತೆಗೂ ಕೆಲವು ಪೊಲೀಸರು ಶಾಮೀಲಾಗಿದ್ದಾರೆ. ಆದುದರಿಂದಲೇ, ಕೆಲವು ವಿದ್ಯಾರ್ಥಿಗಳ ವೇಷದಲ್ಲಿರುವ ಸಂಘಪರಿವಾರದ ಯುವಕರು ದೂರು ಸಲ್ಲಿಸಿದಾಕ್ಷಣ, ಅದನ್ನು ಪ್ರಸಾದವೆಂದು ಸ್ವೀಕರಿಸಿರುವ ನಮ್ಮ ಪೊಲೀಸ್ ಇಲಾಖೆ ಆಮ್ನೆಸ್ಟಿ ಮೇಲೆ ‘ದೇಶದ್ರೋಹ’ ಪ್ರಕರಣವನ್ನು ದಾಖಲಿಸಿದೆ. ಇಡೀ ದೇಶ ಪೊಲೀಸರ ಕೃತ್ಯಕ್ಕೆ ಉಗಿಯುತ್ತಿದ್ದರೆ, ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ ಸರಕಾರ ಮಾತ್ರ ಕಣ್ಣೆರಡು ಬತ್ತ್ತಿ ಹೋಗಿರುವ ದೃತರಾಷ್ಟ್ರನಂತೆ ವರ್ತಿಸುತ್ತಿದೆ. ಬೆಂಗಳೂರಿನ ಥಿಯಾಲಾಜಿಕಲ್ ಕಾಲೇಜಿನಲ್ಲಿ ಅಂದು ಏನು ನಡೆಯಿತು ಎನ್ನುವುದನ್ನು ಅಲ್ಲಿ ಉಪಸ್ಥಿತರಿದ್ದ ವಿವಿಧ ವ್ಯಕ್ತಿಗಳು, ಪತ್ರಕರ್ತರು ಈಗಾಗಲೇ ಸ್ಪಷ್ಟವಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲಿ ನಮ್ಮವರೇ ಆಗಿರುವ ಕಾಶ್ಮೀರಿಗಳು ತಮ್ಮ ನೋವನ್ನು ತೋಡಿಕೊಂಡರು. ಸೇನೆ ಕಾಶ್ಮೀರದಲ್ಲಿ ಮಾಡುತ್ತಿರುವ ಹಿಂಸೆಗಳಿಗೆ ಹೇಗೆ ಕಾಶ್ಮೀರಿಗಳು ಬಲಿಯಾಗುತ್ತಿದ್ದಾರೆ ಎನ್ನುವುದನ್ನು ಹಲವರು ಹೃದಯವಿದ್ರಾವಕವಾಗಿ ತೋಡಿಕೊಂಡರು.
ನೆರೆದವರೆಲ್ಲ ಅವರ ವಿವರಗಳಿಗೆ ಕಣ್ಣೀರಾಗಿದ್ದರು. ಅಲ್ಲಿ ಸೇನೆಯ ವಿರುದ್ಧ ಯಾರೂ ಮಾತನಾಡಿಲ್ಲ. ಸೇನೆ ತನ್ನ ವಿಶೇಷಾಧಿಕಾರವನ್ನು ಬಳಸಿಕೊಂಡು ನಮ್ಮವರೇ ಆಗಿರುವ ಕಾಶ್ಮೀರಿಗಳ ವಿರುದ್ಧ ನಡೆಸುತ್ತಿರುವ ಹಿಂಸೆಯ ಬಗ್ಗೆ ಬೆಳಕು ಚೆಲ್ಲುವುದು ತಪ್ಪು ಎಂದಾದರೆ, ನಾವು ಕಾಶ್ಮೀರವನ್ನು ನಮ್ಮದು ಎಂದು ಘೋಷಿಸಿಕೊಳ್ಳುವುದರಲ್ಲಿ ಏನು ಅರ್ಥವಿದೆ? ಕಾಶ್ಮೀರ ನಮ್ಮದು ಹೌದು ಎಂದಾದರೆ, ಕಾಶ್ಮೀರದಲ್ಲಿ ಪಾಲೆಟ್ ಬುಲೆಟ್‌ಗಳಿಂದ ಜರ್ಜರಿತವಾಗಿರುವ ಕಾಶ್ಮೀರಿಗಳೂ ನಮ್ಮವರು. ನಾಪತ್ತೆಯಾಗಿರುವ ಮಕ್ಕಳಿಗಾಗಿ ಕಾಯುತ್ತಿರುವ ಪೋಷಕರ ಕಣ್ಣೀರೂ ನಮ್ಮದು. ಅದಕ್ಕಾಗಿ ಕಣ್ಣೀರು ಮಿಡಿಯುವುದು ಈ ದೇಶದ ಎಲ್ಲರ ಹಕ್ಕು. ಕಾಶ್ಮೀರಿಗಳ ಪರವಾಗಿ ಮಾತನಾಡುವ ಮೂಲಕವಷ್ಟೇ ನಾವು ಕಾಶ್ಮೀರವನ್ನು ನಮ್ಮದಾಗಿಸಿಕೊಳ್ಳಬಹುದು. ಇದೇ ಸಂದರ್ಭದಲ್ಲಿ, ಇಂತಹ ಚರ್ಚೆಗಳನ್ನು ಹೇಗೆ ದಿಕ್ಕು ತಪ್ಪಿಸಬಹುದು ಎನ್ನುವುದನ್ನು ಚೆನ್ನಾಗಿ ಅರಿತುಕೊಂಡಿರುವ ಸಂಘಪರಿವಾರದ ತರುಣರು, ಇಲ್ಲಿಯೂ ತಮ್ಮದೇ ಕೆಲವು ಸ್ವಯಂ ಘೋಷಿತ ‘ಕಾಶ್ಮೀರಿ ಪಂಡಿತ’ರನ್ನು ತಂದು ಕೂರಿಸಿದ್ದಾರೆ. ಅವರು ಚರ್ಚೆ ನಡೆಯುವುದಕ್ಕೆ ಆಸ್ಪದವೇ ನೀಡದೆ ‘ಮಾನವಹಕ್ಕುಗಳ ಕುರಿತಂತೆ ಮಾತನಾಡಿದವರನ್ನು ‘ಉಗ್ರವಾದಿಗಳು’ ಎಂದು ನಿಂದಿಸಿದ್ದಾರೆ. ಇದು ಒಟ್ಟು ಗದ್ದಲಕ್ಕೆ ಕಾರಣವಾಗಿದೆ.
ಇದೇ ಸಂದರ್ಭದಲ್ಲಿ ಕೆಲವು ಕಾಶ್ಮೀರಿಗಳು ‘ಆಝಾದಿ’ ಘೋಷಣೆಯನ್ನು ಕೂಗಿದ್ದಾರೆ ಎಂಬ ಆರೋಪಗಳೂ ಇವೆ. ಘೋಷಣೆ ಕೂಗಿದ್ದಾರೆ ಎಂದೇ ಇರಲಿ. ಇಂದು ದೇಶಾದ್ಯಂತ ಆಝಾದಿಯ ಘೋಷಣೆ ಮೊಳಗುತ್ತಿದೆ. ಬ್ರಾಹ್ಮಣ್ಯದ ವಿರುದ್ಧ, ಸಂಘಪರಿವಾರದ ವಿರುದ್ಧ, ಕಾರ್ಪೊರೇಟ್ ನಿಯಂತ್ರಣದ ವಿರುದ್ಧ ಘೋಷಣೆಗಳು ಮೊಳಗುತ್ತಲೇ ಇವೆೆ. ಭಾರತದ ಶ್ರೀಸಾಮಾನ್ಯರು ಹೇಗೆ ಹಂತಹಂತವಾಗಿ ಬೇರೆ ಬೇರೆ ಹಿತಾಸಕ್ತಿಗಳ ಕಾರಣದಿಂದ ತಮ್ಮ ಸ್ವಾತಂತ್ರವನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಸದ್ಯಕ್ಕೆ ಚರ್ಚೆಯಲ್ಲಿರುವ ವಿಷಯ. ಈಗಾಗಲೇ ದಿಲ್ಲಿಯಲ್ಲಿ ‘ಆಝಾದಿ’ ಘೋಷಣೆಗಾಗಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದೇಶದ್ರೋಹ ಮೊಕದ್ದಮೆಯನ್ನು ದಾಖಲಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಅಲ್ಲಿಯೂ, ಎಬಿವಿಪಿ ಸಂಘಟನೆಯ ಕಾರ್ಯಕರ್ತರೇ ವಿವಾದವನ್ನು ಸೃಷ್ಟಿಸಿದ್ದರು ಎನ್ನುವುದು ಇದೀಗ ಜಗಜ್ಜಾಹೀರಾಗಿದೆ. ಕನ್ಹಯ್ಯಿ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಹೇಗೆ ಮೋದಿ ಸರಕಾರ ಬಾಲ ಸುಟ್ಟುಕೊಂಡಿತು ಎನ್ನುವುದನ್ನೂ ನಾವು ನೋಡಿದ್ದೇವೆ. ಕನ್ಹಯ್ಯೋ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದಾಗ, ಅದನ್ನು ರಾಜ್ಯದ ಕಾಂಗ್ರೆಸ್ ನಾಯಕರು ವಿರೋಧಿಸಿದ್ದರು. ವಿಪರ್ಯಾಸವೆಂದರೆ, ಇದೀಗ ಸಿದ್ದರಾಮಯ್ಯ ಅವರ ಸರಕಾರದಡಿಯಲ್ಲೇ ಆಮ್ನೆಸ್ಟಿಯಂತಹ ಮಾನವ ಹಕ್ಕು ಹೋರಾಟಗಾರ ಸಂಸ್ಥೆಯೊಂದರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಅದೂ ಸಂಘಪರಿವಾರದ ಮರಿಯಾಗಿರುವ ಎಬಿವಿಪಿಯ ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ.
ಇಲ್ಲಿ ಸಮಸ್ಯೆ ದೇಶಭಕ್ತರ ವೇಷದಲ್ಲಿರುವ ಎಬಿವಿಪಿಯವರದ್ದಲ್ಲ. ಅವರು ಇಂತಹ ಸಂದರ್ಭಗಳನ್ನು ದುರುಪಯೋಗ ಪಡಿಸುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಅವರ ಈ ಕಪಟ ಪ್ರತಿಭಟನೆಗಳ ಅರಿವು ದೇಶದ ಜನರಿಗಿದೆ. ಆದರೆ ಸಮಸ್ಯೆ, ದೇಶದ್ರೋಹದಂತಹ ಕಾಯ್ದೆಯನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರದಡಿಯಲ್ಲಿ ಪೊಲೀಸ್ ಇಲಾಖೆ ಬಳಸಿರುವುದು. ಹೀಗಿರುವಾಗ ನರೇಂದ್ರ ಮೋದಿಯ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸುವುದರಲ್ಲಿ ಅರ್ಥವೇನಿದೆ? ಕಳೆದ ಒಂದು ವರ್ಷದಿಂದ ರಾಜ್ಯದ ಪೊಲೀಸರು ಒಳಗಿಂದೊಳಗೇ ಸರಕಾರಕ್ಕೆ ಮುಜುಗರವಾಗುವಂತೆ ಬೇರೆ ಬೇರೆ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಮೀಸಲಾತಿಗಾಗಿ ಬೀದಿಗಿಳಿದ ದಲಿತರ ಮೇಲೆ ಹಲ್ಲೆ, ನೀರಿಗಾಗಿ ಬೀದಿಗಿಳಿದ ಅಮಾಯಕ ರೈತರು, ಮಹಿಳೆಯರ ಮೇಲೆ ಬರ್ಬರ ದೌರ್ಜನ್ಯ, ಪೊಲೀಸರೇ ಮುಷ್ಕರಕ್ಕಿಳಿದಿರುವುದು ಇವೆಲ್ಲವೂ, ಪೊಲೀಸ್ ಇಲಾಖೆಯೊಳಗಿರುವ ಸಂಘಪರಿವಾರ ಮನಸ್ಥಿತಿ ಹೇಗೆ ಒಳಗಿಂದೊಳಗೇ ಸರಕಾರದ ವಿರುದ್ಧ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.
ಆದರೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಇದನ್ನು ಗುರುತಿಸಿ, ತಕ್ಕ ಔಷಧವನ್ನು ನೀಡುವ ಸಾಮರ್ಥ್ಯವೇ ಇಲ್ಲದಂತಾಗಿದೆ. ಇದೀಗ, ಒಂದು ರಾಜಕೀಯ ಪಕ್ಷದ ವಿದ್ಯಾರ್ಥಿ ಸಂಘಟನೆ ದೂರು ನೀಡಿದಾಕ್ಷಣ ಒಂದು ಅಂತಾರಾಷ್ಟ್ರೀಯ ಸಂಘಟನೆಯ ವಿರುದ್ಧ ಪೊಲೀಸರು ರಾಜದ್ರೋಹದ ಪ್ರಕರಣ ದಾಖಲಿಸಿರುವುದು ಅವರ ಮನಸ್ಥಿತಿಯ ಮುಂದುವರಿದ ಭಾಗವಾಗಿದೆ. ಗೃಹ ಸಚಿವ ಪರಮೇಶ್ವರ್ ಇದನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಯಲಾರದೆ ಒದ್ದಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಂಘಪರಿವಾರ ಮಾಧ್ಯಮ ಮತ್ತು ಪೊಲೀಸ್ ಇಲಾಖೆಯೊಳಗಿನ ಜನರನ್ನು ಬಳಸಿಕೊಂಡು ಪ್ರಕರಣವನ್ನು ತನಗೆ ಪೂರಕವಾಗಿ ನಿಭಾಯಿಸುತ್ತಿದೆ. ಆ ಮೂಲಕ ಮಾನವ ಹಕ್ಕು ಹೋರಾಟಗಾರ ಸಂಘಟನೆಯನ್ನೇ ದೇಶದ್ರೋಹಿ ಸಂಘಟನೆಯಾಗಿಸಲು ಹೊರಟಿದೆ. ಈಗಾಗಲೇ ಪರಿಸರಕ್ಕಾಗಿ, ಮಾನವ ಹಕ್ಕುಗಳಿಗಾಗಿ ಹೋರಾಡುವ ಕೆಲವು ಎನ್‌ಜಿಒಗಳನ್ನು ದೇಶದ್ರೋಹಿಗಳನ್ನಾಗಿಸಿ ಅದರ ಬಾಯಿಮುಚ್ಚಿಸುವ ಮುಂದುವರಿದ ಭಾಗವೇ ಇದಾಗಿದೆ. ಆದರೆ ಇಂತಹದೊಂದು ಸನ್ನಿವೇಶ ‘ಜಾತ್ಯತೀತ’ ಎನ್ನುವ ಕಾಂಗ್ರೆಸ್ ಸರಕಾರದಡಿಯಲ್ಲಿ ನಡೆದಿರುವುದು, ಹೇಗೆ ಕಾಂಗ್ರೆಸ್ ಪಕ್ಷವೂ ಸಂಘಪರಿವಾರದ ಅಜೆಂಡಾಗಳಿಗೆ ತಲೆ ಕುಣಿಸುತ್ತಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.







