ಅಮೆರಿಕದ ಎನ್‌ಎಸ್‌ಎ ಕಂಪ್ಯೂಟರ್ ಜಾಲಕ್ಕೇ ಕನ್ನ?
ರಶ್ಯದತ್ತ ಸಂಶಯದ ಬೆರಳು
ವಾಶಿಂಗ್ಟನ್, ಆ. 17: ವಿದೇಶಿ ಸರಕಾರಗಳು ಅಥವಾ ಯಾವುದಾದರೂ ನಿರ್ದಿಷ್ಟ ಸಂಸ್ಥೆಗಳ ಕಂಪ್ಯೂಟರ್ ವ್ಯವಸ್ಥೆಗೆ ಕನ್ನ ಹಾಕಲು ಅಮೆರಿಕದ ನ್ಯಾಶನಲ್ ಸೆಕ್ಯುರಿಟಿ ಏಜನ್ಸಿ (ಎನ್‌ಎಸ್‌ಎ) ಬಳಸುತ್ತದೆ ಎನ್ನಲಾದ ಕೋಡ್‌ಗಳು ಈ ವಾರ ವೆಬ್‌ಸೈಟ್‌ಗಳಲ್ಲಿ ಬಿಡುಗಡೆಯಾಗಿವೆ.
ಇದು ಅಮೆರಿಕದ ಗುಪ್ತಚರ ಸಂಸ್ಥೆಗಳ ಭಾರೀ ಕಳವಳಕ್ಕೆ ಕಾರಣವಾಗಿದೆ. ಬೇರೆ ದೇಶಗಳ ಕಂಪ್ಯೂಟರ್ ವ್ಯವಸ್ಥೆಗಳಿಗೆ ಕನ್ನ ಹಾಕುವ ಅಮೆರಿಕದ ಉನ್ನತ ಸ್ತರದ ಕನ್ನಗಾರರ ಕಂಪ್ಯೂಟರ್ ವ್ಯವಸ್ಥೆಗಳಿಗೇ ಈ ಬಾರಿ ಕನ್ನ ಬಿದ್ದಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ.
‘ಶ್ಯಾಡೋ ಬ್ರೋಕರ್ಸ್’ ಎಂಬುದಾಗಿ ತನ್ನನ್ನು ಕರೆದುಕೊಂಡ ಗುಂಪೊಂದು ಈ ಕೋಡ್‌ಗಳನ್ನು ಬಹಿರಂಗಪಡಿಸಿದೆ. ಈ ಕೋಡ್‌ಗಳು ಎನ್‌ಎಸ್‌ಎ ಬಳಸುವ ಕೋಡ್‌ಗಳ ನೈಜ ಮಾದರಿಯಂತೆ ಕಂಡುಬರುತ್ತಿವೆ. ಆದಾಗ್ಯೂ, ಅವುಗಳು ಹಳೆಯದು ಎನ್ನಲಾಗಿದೆ.
ಎನ್‌ಎಸ್‌ಎಯ ಮಾಲ್‌ವೇರ್‌ಗಳಲ್ಲಿ ಈ ಕೋಡ್‌ಗಳು ಇರುತ್ತವೆ. ಹೆಚ್ಚಿನ ಕೋಡ್‌ಗಳನ್ನು ನೆಟ್‌ವರ್ಕ್ ಫಯರ್‌ವಾಲ್ ಮೂಲಕ ರಶ್ಯ, ಚೀನಾ ಮತ್ತು ಇರಾನ್ ಮುಂತಾದ ಎದುರಾಳಿಗಳ ಕಂಪ್ಯೂಟರ್ ವ್ಯವಸ್ಥೆಗಳಿಗೆ ಲಗ್ಗೆ ಇಡಲು ಸಾಧ್ಯವಾಗುವಂತೆ ರೂಪಿಸಲಾಗಿದೆ.
ಹೀಗೆ ವಿದೇಶಿ ಕಂಪ್ಯೂಟರ್ ವ್ಯವಸ್ಥೆಯೊಳಗೆ ಹೊಕ್ಕ ಕೋಡ್‌ಗಳು ಅಲ್ಲಿ ತನ್ನದೇ ಆದ ಪ್ರೋಗ್ರಾಂ ಒಂದನ್ನು ಅಳವಡಿಸಿಕೊಳ್ಳಲು ಎನ್‌ಎಸ್‌ಎಗೆ ಅವಕಾಶ ಮಾಡಿಕೊಡುತ್ತವೆ. ಇವುಗಳು ವರ್ಷಗಳ ಕಾಲ ಯಾರ ಗಮನಕ್ಕೂ ಬಾರದೆ ಎದುರಾಳಿ ದೇಶಗಳ ಕಂಪ್ಯೂಟರ್ ವ್ಯವಸ್ಥೆಗಳಲ್ಲಿ ಅಡಗಿ ಕೂತು ಮಾಹಿತಿಗಳನ್ನು ಕದಿಯುತ್ತವೆ ಹಾಗೂ ಕಂಪ್ಯೂಟರ್ ಜಾಲಗಳ ಮೇಲೆ ದಾಳಿ ಮಾಡುತ್ತವೆ.
ಈ ಬಾರಿ ಎನ್‌ಎಸ್‌ಎ ಮೇಲೆ ದಾಳಿ ನಡೆಸಿದ್ದು ಎಡ್ವರ್ಡ್ ಸ್ನೋಡನ್ ಆಗಿರಲಿಕ್ಕಿಲ್ಲ ಎಂದು ಪರಿಣತರು ಹೇಳುತ್ತಾರೆ.
ಈ ಕೃತ್ಯದ ಹಿಂದೆ ರಶ್ಯದ ಕೈವಾಡ ಇರಬಹುದು ಎನ್ನುವ ಸಾಧ್ಯತೆಯನ್ನು ಎನ್‌ಎಸ್‌ಎ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.







