‘‘ಮೋದಿಯ ಮಾತುಗಳು ಭಾರತದ ಹಸ್ತಕ್ಷೇಪಕ್ಕೆ ಸಾಕ್ಷಿ’’
ಬಲೂಚಿಸ್ತಾನ ಸರಕಾರದ ವಕ್ತಾರ
ಕ್ವೆಟ್ಟ, ಆ. 17: ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ತನ್ನ ಸ್ವಾತಂತ್ರ ದಿನದ ಭಾಷಣದಲ್ಲಿ ಖಂಡಿಸಿರುವುದು ಅವರ ದೇಶ ಈ ಪ್ರಾಂತದಲ್ಲಿ ನಡೆಸುತ್ತಿರುವ ಹಸ್ತಕ್ಷೇಪಕ್ಕೆ ಸಾಕ್ಷಿಯಾಗಿದೆ ಎಂದು ಬಲೂಚಿಸ್ತಾನ್ ಪ್ರಾಂತೀಯ ಸರಕಾರದ ವಕ್ತಾರರೊಬ್ಬರು ಜರ್ಮನ್ ವಾರ್ತಾ ಸಂಸ್ಥೆ ‘ಡಾಶ್ ವೆಲ್‌ಲ್’ಗೆ ಹೇಳಿದ್ದಾರೆ.
‘‘ಭಾರತೀಯ ಪ್ರಧಾನಿಯ ಭಾಷಣವು ಅವರ ದೇಶ ಬಲೂಚಿಸ್ತಾನದಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎನ್ನುವುದಕ್ಕೆ ಪುರಾವೆಯಾಗಿದೆ. ಭಾರತ ಮತ್ತು ಅಫ್ಘಾನಿಸ್ತಾನದ ಗುಪ್ತಚರ ಸಂಸ್ಥೆಗಳು ಬಲೂಚ್ ಬಂಡುಕೋರರನ್ನು ಬೆಂಬಲಿಸುತ್ತಿವೆ ಹಾಗೂ ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ’’ ಎಂದು ಅನ್ವರುಲ್ ಹಕ್ ಕಾಕರ್ ಹೇಳಿದರು. ಭಯೋತ್ಪಾದನೆ ವಿರುದ್ಧದ ತನ್ನ ದೃಢ ನಿಲುವಿಗಾಗಿ ಹಾಗೂ ತಮ್ಮ ಮೇಲೆ ಪಾಕಿಸ್ತಾನದವರೇ ಮಾಡುತ್ತಿರುವ ಆಕ್ರಮಣಗಳ ವಿರುದ್ಧ ಮಾತನಾಡಿರುವುದಕ್ಕಾಗಿ ಪಾಕಿಸ್ತಾನದ ಬಲೂಚಿ ಜನರು ತನ್ನನ್ನು ಪ್ರಶಂಸಿಸಿದ್ದಾರೆ ಎಂಬುದಾಗಿ ಸೋಮವಾರದಂದು ಮಾಡಿದ ಸ್ವಾತಂತ್ರ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ‘‘ಬಲೂಚಿಸ್ತಾನ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕಾಗಿ ಪಾಕಿಸ್ತಾನ ಜಗತ್ತಿಗೆ ಉತ್ತರ ನೀಡಬೇಕಾದ ಸಮಯ ಬಂದಿದೆ’’ ಎಂದಿದ್ದರು. ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಸೇನೆ ಮಾನವಹಕ್ಕುಗಳ ಉಲ್ಲಂಘನೆ ನಡೆಸುತ್ತಿದೆ ಎಂಬ ಆರೋಪಗಳನ್ನು ವಕ್ತಾರರು ನಿರಾಕರಿಸಿದರು. ‘‘ಸರಕಾರಿ ಸೈನಿಕರು ಮತ್ತು ನಾಗರಿಕರ ಮೇಲೆ ದಾಳಿ ನಡೆಸುತ್ತಿರುವ ಭಯೋತ್ಪಾದಕರನ್ನು ಮಾತ್ರ ದಮನಿಸುತ್ತಿದ್ದೇವೆ’’ ಎಂದರು.
ಪಾಕ್‌ನ ಅತ್ಯಂತ ಸಂಕೀರ್ಣ ಪ್ರದೇಶ: ಮಾಜಿ ರಾಜತಾಂತ್ರಿಕ
ವಾಶಿಂಗ್ಟನ್, ಆ. 17: ಬಲೂಚಿಸ್ತಾನ ಪಾಕಿಸ್ತಾನದ ಅತ್ಯಂತ ಸಂಕೀರ್ಣ ವಲಯವಾಗಿದ್ದು, ಈ ಅಶಾಂತ ಪ್ರಾಂತದ ಮಹತ್ವದ ಭಾಗಗಳ ಮೇಲೆ ಸರಕಾರದ ನಿಯಂತ್ರಣ ಇದೆಯೆಂದು ಹೇಳಲಾಗದು ಎಂದು ಅಮೆರಿಕಕ್ಕೆ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೈನ್ ಹಕ್ಕಾನಿ ಹೇಳಿದ್ದಾರೆ.‘‘ಬಲೂಚಿಸ್ತಾನ ಪಾಕಿಸ್ತಾನದ ಅತ್ಯಂತ ಸಂಕೀರ್ಣ ವಲಯ. ದುರದೃಷ್ಟವಶಾತ್ ಜನರು ಅಲ್ಲಿನ ಸಮಸ್ಯೆಗಳನ್ನು ಸರಳೀಕರಿಸಲು ಪ್ರಯತ್ನಿಸುತ್ತಾರೆ. ಅಲ್ಲಿನ ಸಮಸ್ಯೆಗಳಿಗೆ ಪಾಕಿಸ್ತಾನಿ ಸೇನೆ ನಡೆಸಿದ ತಪ್ಪುಗಳು ಅಥವಾ ಅಧಿಕಾರದಲ್ಲಿರುವವರ ಭ್ರಷ್ಟಾಚಾರ ಅಥವಾ ರಾಷ್ಟ್ರೀಯವಾದಿಗಳು ಅಥವಾ ತಾಲಿಬಾನ್‌ನ ಉಪಸ್ಥಿತಿ- ಇವುಗಳಲ್ಲಿ ಯಾವುದಾದರೂ ಒಂದನ್ನು ಜವಾಬ್ದಾರಿಯನ್ನಾಗಿಸಲು ಸಾಧ್ಯವಿಲ್ಲ. ಅಲ್ಲಿನ ಸಮಸ್ಯೆಗಳಿಗೆ ಇವುಗಳೆಲ್ಲವೂ ಕಾರಣ’’ ಎಂದು ‘ದ ಅಟ್ಲಾಂಟಿಕ್ ಮ್ಯಾಗಝಿನ್’ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಬಲೂಚಿಸ್ತಾನದ ಹೆಚ್ಚಿನ ಭಾಗಗಳು ಪಾಕಿಸ್ತಾನದ ಕೇಂದ್ರ ಸರಕಾರದ ಆಡಳಿತಕ್ಕೆ ಒಳಪಟ್ಟಿದೆ ಎಂದೇನೂ ಹೇಳಲು ಸಾಧ್ಯವಿಲ್ಲ ಎಂದರು. ಬಲೂಚ್ ರಾಷ್ಟ್ರೀಯವಾದಿಗಳು ಸ್ವತಂತ್ರ ಅಥವಾ ಸ್ವಾಯತ್ತ ಬಲೂಚಿಸ್ತಾನಕ್ಕಾಗಿ ಹೋರಾಡುತ್ತಿದ್ದಾರೆ ಹಾಗೂ ಬುಡಕಟ್ಟು ಬಲೂಚಿಗಳು ಅವರ ಪರವಾಗಿ ಸಹಾನುಭೂತಿ ಹೊಂದಿದ್ದಾರೆ ಎಂದು ಮಾಜಿ ಪಾಕ್ ರಾಜತಾಂತ್ರಿಕ ಹೇಳಿದರು. ‘‘ಸೇನೆಯು ಅವರನ್ನು ದಮನಿಸಲು ಯತ್ನಿಸುತ್ತಿದೆ. ಹಲವು ಸಂದರ್ಭಗಳಲ್ಲಿ ಅದು ಇದಕ್ಕಾಗಿ ಉಗ್ರರನ್ನು ಬಳಸಿಕೊಳ್ಳುತ್ತಿದೆ’’ ಎಂದರು.







