ಟರ್ಕಿ: 38,000 ಕೈದಿಗಳ ಬಿಡುಗಡೆ
ಕ್ಷಿಪ್ರಕ್ರಾಂತಿ ಆರೋಪಿಗಳಿಗೆ ಜೈಲಿನಲ್ಲಿ ಸ್ಥಳಾವಕಾಶ ಕಲ್ಪಿಸುವ ಕ್ರಮ
ಅಂಕಾರ, ಆ. 17: 38,000 ಕೈದಿಗಳ ಷರತ್ತುಬದ್ಧ ಬಿಡುಗಡೆಗೆ ಅವಕಾಶ ಕಲ್ಪಿಸುವ ಆದೇಶವೊಂದನ್ನು ಟರ್ಕಿ ಬುಧವಾರ ಹೊರಡಿಸಿದೆ ಎಂದು ಕಾನೂನು ಸಚಿವ ಬೆಕಿರ್ ಬೊಝ್ಡಿಗ್ ತಿಳಿಸಿದರು. ಕಳೆದ ತಿಂಗಳು ನಡೆದ ವಿಫಲ ಕ್ಷಿಪ್ರಕ್ರಾಂತಿಯಲ್ಲಿ ಪಾಲುಗೊಂಡಿರುವ ಆರೋಪದಲ್ಲಿ ಸಾವಿರಾರು ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಅವರಿಗೆ ಸೆರೆಮನೆಗಳಲ್ಲಿ ಜಾಗ ಕಲ್ಪಿಸಲು ಈ ಕ್ರಮವನ್ನು ಸರಕಾರ ತೆಗೆದುಕೊಂಡಿದೆ ಎಂದು ಭಾವಿಸಲಾಗಿದೆ.
ಎರಡು ವರ್ಷ ಅಥವಾ ಅದಕ್ಕಿಂತಲೂ ಕಡಿಮೆ ಜೈಲು ವಾಸ ಅವಧಿ ಬಾಕಿಯಿರುವ ಕೈದಿಗಳನ್ನು ಬಿಡುಗಡೆ ಮಾಡಲು ಆದೇಶ ಅವಕಾಶ ಕಲ್ಪಿಸುತ್ತದೆ. ಅದೇ ವೇಳೆ, ತಮ್ಮ ಜೈಲು ಶಿಕ್ಷೆಯ ಅರ್ಧ ಅವಧಿಯನ್ನು ಈಗಾಗಲೇ ಮುಗಿಸಿರುವ ಕೈದಿಗಳು ಪರೋಲ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಆದಾಗ್ಯೂ, ಕೊಲೆ, ಕೌಟುಂಬಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಭಯೋತ್ಪಾದನೆ ಮತ್ತು ಸರಕಾರದ ವಿರುದ್ಧದ ಅಪರಾಧಗಳಲ್ಲಿ ಜೈಲಿಗೆ ಹೋದವರಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ. ಜುಲೈ ಒಂದರ ನಂತರ ನಡೆದ ಅಪರಾಧಗಳಿಗೂ ಈ ರಿಯಾಯಿತಿ ಅನ್ವಯಿಸುವುದಿಲ್ಲ. ಹಾಗಾಗಿ, ವಿಫಲ ಕ್ಷಿಪ್ರ ಕ್ರಾಂತಿಯಲ್ಲಿ ಭಾಗಿಯಾದ ಆರೋಪದಲ್ಲಿ ಜೈಲು ಸೇರಿದವರಿಗೆ ಇದು ಅನ್ವಯಿಸುವುದಿಲ್ಲ.
ಆದಾಗ್ಯೂ, ಇದು ಕ್ಷಮೆ ಅಥವಾ ದಯೆಯಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವರು, ಇದು ಕೈದಿಗಳ ಷರತ್ತುಬದ್ಧ ಬಿಡುಗಡೆ ಅಷ್ಟೆ ಎಂದರು.
ಜುಲೈ 15ರಂದು ನಡೆದ ವಿಫಲ ಕ್ಷಿಪ್ರಕ್ರಾಂತಿಯನ್ನು ಅಮೆರಿಕದಲ್ಲಿ ನೆಲೆಸಿರುವ ಧರ್ಮ ಗುರು ಫತೇವುಲ್ಲಾ ಗುಲೇನ್‌ರ ಬೆಂಬಲಿಗರು ನಡೆಸಿದ್ದಾರೆಂದು ಟರ್ಕಿ ಆರೋಪಿಸಿದೆ. ಗುಲೇನ್‌ರ ಬೆಂಬಲಿಗರು ಸೇನೆ ಮತ್ತು ಸರಕಾರದ ಇತರ ಸಂಸ್ಥೆಗಳೊಳಗೆ ನುಸುಳಿದ್ದಾರೆ ಎಂದು ಅದು ಹೇಳಿದೆ. ವಿಫಲ ಕ್ಷಿಪ್ರಕ್ರಾಂತಿಯಲ್ಲಿ ಕನಿಷ್ಠ 270 ಮಂದಿ ಸಾವಿಗೀಡಾಗಿದ್ದಾರೆ.
2,000ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳ ವಜಾ
ಕಳೆದ ತಿಂಗಳು ನಡೆದ ವಿಫಲ ಸೇನಾ ದಂಗೆಗೆ ಸಂಬಂಧಿಸಿ ಟರ್ಕಿ ಬುಧವಾರ 2,000ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಹಾಗೂ ಸೇನೆ ಮತ್ತು ಬಿಟಿಕೆ ಸಂವಹನ ತಂತ್ರಜ್ಞಾನ ಪ್ರಾಧಿಕಾರದ ನೂರಾರು ಸದಸ್ಯರನ್ನು ವಜಾಗೊಳಿಸಿತು.
ಈ ಸಂಬಂಧ ಸರಕಾರವು ತುರ್ತು ಪರಿಸ್ಥಿತಿ ಆಡಳಿತದ ಅಧಿಕಾರಗಳನ್ನು ಬಳಸಿಕೊಂಡು ಎರಡು ಆದೇಶಗಳನ್ನು ಹೊರಡಿಸಿತು. ವಜಾಗೊಂಡವರನ್ನು ಅಮೆರಿಕದಲ್ಲಿ ನೆಲೆಸಿರುವ ಧರ್ಮಗುರು ಫತೇವುಲ್ಲಾ ಗುಲೇನ್‌ರ ಅನುಯಾಯಿಗಳು ಎಂಬುದಾಗಿ ಬಣ್ಣಿಸಲಾಗಿದೆ. ಜುಲೈ 15ರಂದು ನಡೆದ ಕ್ಷಿಪ್ರಕ್ರಾಂತಿಯ ರೂವಾರಿ ಫತೇವುಲ್ಲಾ ಎಂಬುದಾಗಿ ಟರ್ಕಿ ಭಾವಿಸಿದೆ.
ಸರಕಾರ ಈಗಾಗಲೇ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ವಜಾಗೊಳಿಸಿದೆ ಹಾಗೂ ಗುಲೇನ್ ಜೊತೆ ನಂಟು ಹೊಂದಿದೆ ಎನ್ನಲಾದ ಸಾವಿರಾರು ಖಾಸಗಿ ಶಾಲೆಗಳು, ದತ್ತಿ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳನ್ನು ಮುಚ್ಚಿಸಿದೆ.







