ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿ ಜಯಿಸಿದ ಶ್ರೀಲಂಕಾ
ಹೆರಾತ್ ಅಮೋಘ ಬೌಲಿಂಗ್
ಕೊಲಂಬೊ, ಆ.17: ಸ್ಪಿನ್ನರ್ ರಂಗನ ಹೆರಾತ್ ಅತ್ಯುತ್ತಮ ಬೌಲಿಂಗ್(7-64) ನೆರವಿನಿಂದ ಆಸ್ಟ್ರೇಲಿಯ ವಿರುದ್ಧದ 3ನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು 163 ರನ್‌ಗಳ ಅಂತರದಿಂದ ಗೆದ್ದುಕೊಂಡಿರುವ ಶ್ರೀಲಂಕಾ ಮೊದಲ ಬಾರಿ ಆಸೀಸ್ ವಿರುದ್ಧ ವೈಟ್‌ವಾಶ್ ಸಾಧಿಸಿದೆ.
ಗೆಲ್ಲಲು 324 ರನ್ ಗುರಿ ಪಡೆದಿದ್ದ ವಿಶ್ವದ ನಂ.1 ತಂಡ ಆಸ್ಟ್ರೇಲಿಯ ದಿಢೀರನೆ ಕುಸಿತ ಕಂಡು 160 ರನ್‌ಗೆ ಆಲೌಟಾಯಿತು. ಆಸ್ಟ್ರೇಲಿಯ ಉಪ ಖಂಡದಲ್ಲಿ ಸತತ ಮೂರನೆ ಬಾರಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ.
ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಶಾನ್ ಮಾರ್ಷ್ ಬೆಳಗ್ಗಿನ ಅವಧಿಯಲ್ಲಿ ಉತ್ತಮ ಆರಂಭವನ್ನು ನೀಡಿ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಆದರೆ, ಈ ಇಬ್ಬರು ಔಟಾದ ಬಳಿಕ ಆಸೀಸ್ ಕುಸಿತದ ಹಾದಿ ಹಿಡಿಯಿತು.
ಇದಕ್ಕೆ ಮೊದಲು 8ಕ್ಕೆ 312 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೀಲಂಕಾ 2ನೆ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 347 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಧನಂಜಯ ಡಿಸಿಲ್ವಾ ಎರಡನೆ ಇನಿಂಗ್ಸ್‌ನಲ್ಲಿ ಔಟಾಗದೆ 65 ರನ್(74 ಎಸೆತ, 10 ಬೌಂಡರಿ) ಗಳಿಸಿದ್ದರು.





