ಜೋಗದಲ್ಲಿ ಸರ್ವಋತು ಜಲಪಾತ ಯೋಜನೆ

ಬೆಂಗಳೂರು, ಆ.17: ಶಿವಮೊಗ್ಗ ಜಿಲ್ಲೆಯ ಜೋಗ್ ಪ್ರದೇಶದಲ್ಲಿ ನೀರಿನ ಪುನರ್‌ಬಳಕೆ ಮಾಡಿ ಸರ್ವಋತು ಜಲಪಾತ ನಿರ್ಮಿಸುವ ಯೋಜನೆಯನ್ನು ಅಬುದಾಬಿಯ ಬಿಆರ್‌ಎಸ್ ವೆಂಚರ್ಸ್ ಸಂಸ್ಥೆಗೆ ವಹಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.
ಅನಿವಾಸಿ ಭಾರತೀಯ ಬಿ.ಆರ್.ಶೆಟ್ಟಿ ಒಡೆತನದ ಸಂಸ್ಥೆಯ 450 ಕೋಟಿ ರೂ.ಗಳನ್ನು ಈ ಯೋಜನೆಗೆ ವಿನಿಯೋಗಿಸಲು ಮುಂದೆ ಬಂದಿದೆ. ಯೋಜನೆ ಅನುಷ್ಠಾನಕ್ಕೆ ಬಂದ ನಂತರ ಜೋಗ ಜಲಪಾತ ಅಭಿವೃದ್ಧಿ ಪ್ರಾಧಿಕಾರವು ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಕನಿಷ್ಠ ದರ ನಿಗದಿಗೊಳಿಸಲಿದೆ ಎಂದು ಜಯಚಂದ್ರ ಹೇಳಿದರು.
ಜೋಗ ಜಲಪಾತವು ಕೇವಲ ಮಳೆಗಾಲದಲ್ಲಿ ಮಾತ್ರ ನೋಡಲು ಆಕರ್ಷಣೀಯ ವಾಗಿರುತ್ತದೆ. ಕಳೆದ ವರ್ಷ ಸುಮಾರು 8 ಲಕ್ಷ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ. ಸರ್ವಋತು ಜಲಪಾತ ಅನುಷ್ಠಾನಗೊಂಡರೆ ಪ್ರವಾಸಿಗರ ಸಂಖ್ಯೆಯು ಹೆಚ್ಚಲಿದೆ ಎಂದು ಅವರು ಹೇಳಿದರು.
ರಸ್ತೆ ಸುರಕ್ಷತಾ ಕಾಮಗಾರಿ: ಗ್ರಾಮೀಣ ರಸ್ತೆಗಳ ಪರಿಮಿತಿಯಲ್ಲಿ ಬರುವ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ 2016-17ನೆ ಸಾಲಿನಲ್ಲಿ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ನಾಲ್ಕು ವರ್ಷಗಳ ಅವಧಿಯಲ್ಲಿ 200 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅನುಷ್ಠಾನ ಗೊಳಿಸಲು ನಿರ್ಧರಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಐಟಿಐಗೆ ಭೂಮಿ: ಐಟಿಐ ಶಿಕ್ಷಕರಿಗೆ ತರಬೇತಿ ನೀಡಲು ಕೇಂದ್ರ ಸರಕಾರದ ನೆರವಿನೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಬಳ್ಳಾರಿ ನಗರದಲ್ಲಿ ಆಧುನಿಕ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಲು ಸರಕಾರದ ವತಿಯಿಂದ ಐದು ಎಕರೆ ಭೂಮಿಯನ್ನು ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ಇ-ಆಸ್ಪತ್ರೆ: ರಾಜ್ಯದಲ್ಲಿ ಇ-ಆಸ್ಪತ್ರೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅವಶ್ಯವಿರುವ ಮಾಹಿತಿ ತಂತ್ರಜ್ಞಾನ ಉಪಕರಣಗಳನ್ನು 24.70 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಖರೀದಿಸಲು ಟೆಂಡರ್ ಕರೆಯಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅಲ್ಲದೆ, 1,727 ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಬಿಎ-ಬಿಇಡ್ ಕಡ್ಡಾಯಗೊಳಿಸಲಾಗಿದ್ದು, ಕೇಂದ್ರ ಸರಕಾರದ ಎನ್‌ಸಿಟಿಇ ಮಾರ್ಗಸೂಚಿ ಅನ್ವಯ ಮಾಡಲು ತೀರ್ಮಾನಿಸಲಾಗಿದೆ ಎಂದು ಜಯಚಂದ್ರ ಹೇಳಿದರು.
ಅನುಮೋದನೆ: ಧಾರವಾಡದ ಕೆಐಎಡಿಬಿಯ ಹಿಂದಿನ ಭೂ ಸ್ವಾಧೀನಾಧಿಕಾರಿ ಮಹಾಂತೇಶ್ ಬೀಳಗಿ ವಿರುದ್ಧ ಲೋಕಾಯುಕ್ತ ತನಿಖೆಗೆ ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯ ಸಾಮಾನ್ಯ ಸೇವೆಗಳು(ಕರ್ನಾಟಕ ಆತಿಥ್ಯ ಸಂಸ್ಥೆಯ ನೇಮಕಾತಿ) (ತಿದ್ದುಪಡಿ)ನಿಯಮಗಳು- 2016ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಎಸಿಬಿಗೆ ವಾಹನ ಮಂಜೂರು: ಭ್ರಷ್ಟಾಚಾರ ನಿಗ್ರಹ ದಳದ ವಿವಿಧ ದರ್ಜೆಯ ಅಧಿಕಾರಿಗಳಿಗೆ ಮಂಜೂರು ಮಾಡಿರುವ 122 ವಿವಿಧ ಮಾದರಿಯ ವಾಹನಗಳನ್ನು 6.94 ಕೋಟಿ ರೂ.ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ. ಅಡುಗೆ ಕೋನೆಗೆ ಅನುದಾನ: ಮಧ್ಯಾಹ್ನದ ಉಪಾಹಾರ ಯೋಜನೆಯಡಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ 137 ಅಡುಗೆಕೋಣೆ ಮತ್ತು ದಾಸ್ತಾನು ಕೊಠಡಿಗಳು ಹಾಗೂ ಯಾದಗಿರಿ ಜಿಲ್ಲೆಯಲ್ಲಿ 111 ಅಡುಗೆಕೋಣೆ ಮತ್ತು ದಾಸ್ತಾನು ಕೊಠಡಿಗಳನ್ನು 109 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ಹೇಳಿದರು.







