ಹನ್ನೆರಡು ವರ್ಷಗಳ ಕನಸು ನನಸಾಗಿದೆ: ಕಂಚಿನ ಪದಕಕ್ಕೆ ಮುತ್ತಿಟ್ಟ ಸಾಕ್ಷಿ

ರಿಯೋ ಡಿ ಜನೈರೊ, ಆ.18: "ಹನ್ನೆರಡು ವರ್ಷಗಳ ಕನಸು ಇಂದು ನನಸಾಗಿದೆ "ಎಂದು ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸಿದ ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದ್ದಾರೆ.
ಗುರುವಾರ ಬೆಳಗ್ಗಿನ ಜಾವ ನಡೆದ ಒಲಿಂಪಿಕ್ಸ್ ನ ಮಹಿಳೆಯರ ಕುಸ್ತಿ 58 ಕೆ.ಜಿ ಫ್ರೀ ಸ್ಟೈಲ್ ರಿಪಿಚೇಜ್ ಸ್ಪರ್ಧೆಯಲ್ಲಿ ಕಿರ್ಗಿಸ್ತಾನದ ಐಸಿಲೂ ಟೈನೀಬೆಕೋವಾ ಅವರನ್ನು 8-5 ಅಂತರದಿಂದ ಮಣಿಸಿ ಕಂಚಿನ ಪದಕ ಬಾಚಿಕೊಂಡ ಸಾಕ್ಷಿ ಮಲಿಕ್ ಅವರು ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪದಕದ ಖಾತೆ ತೆರೆದಿದ್ದರು.
ಈ ಅಪೂರ್ವ ಸಾಧನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾಕ್ಷಿ ಮಲಿಕ್ ಅವರು ಇಂತಹ ಅಪೂರ್ವ ಸಾಧನೆಗೆ ಹನ್ನೆರಡು ವರ್ಷಗಳ ಕಾಲ ಹಗಲು ರಾತ್ರಿ ಕಠಿಣ ಅಭ್ಯಾಸ ನಡೆಸಿದ್ದೆ. ಅದರ ಪ್ರತಿಫಲ ಸಿಕ್ಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಲಿಂಪಿಕ್ಸ್ ನ ಕುಸ್ತಿಯಲ್ಲಿ ಪದಕ ಜಯಸಿದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿರುವ ಸಾಕ್ಷಿ ತನ್ನೊಂದಿಗಿರುವ ಭಾರತದ ಇತರ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಹರ್ಯಾಣದ 23ರ ಹರೆಯದ ಸಾಕ್ಷಿ 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. 2014ರ ಇಂಚೋನ್ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದ್ದುಕೊಂಡಿದ್ದರು. ಒಲಿಂಪಿಕ್ಸ್ ನ ಮಹಿಳೆಯರ 58 ಕೆಜಿ ಫ್ರೀ ಸ್ಟೈಲ್ ಕುಸ್ತಿ ಪ್ಲೇ ಆಪ್‌ನಲ್ಲಿ ಕಿರ್ಗಿಸ್ತಾನದ ಐಸಿಲೂ ಟೈನೀಬೆಕೋವಾ ಅವರನ್ನು 8-5 ಅಂತರದಿಂದ ಮಣಿಸಿ ಕಂಚಿನ ಪದಕ ಬಾಚಿಕೊಂಡಿರುವ ಸಾಕ್ಷಿ ಆರಂಭದ ಹಣಾಹಣಿಯಲ್ಲಿ 0-5 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದರು. ಬಳಿಕ ಚೇತರಿಸಿಕೊಂಡು ಗೆಲುವು ಸಾಧಿಸಿದರು.
ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮಹಿಳಾ ಅಥ್ಲೀಟ್‌ಗಳು
ಕರ್ಣಂ ಮಲ್ಲೇಶ್ವರಿ-ವೇಟ್ ಲಿಫ್ಟಿಂಗ್ - ಸಿಡ್ನಿ, 2000
ಎಂಸಿ ಮೇರಿ ಕೋಮ್-ಬಾಕ್ಸಿಂಗ್-ಲಂಡನ್, 2012
ಸೈನಾ ನೆಹ್ವಾಲ್ -ಬ್ಯಾಡ್ಮಿಂಟನ್-ಲಂಡನ್, 2012
ಸಾಕ್ಷಿ ಮಲಿಕ್-ಕುಸ್ತಿ -ರಿಯೋ ಡಿ ಜನೈರೊ ,2016
,,,,,,,,,,,,,





