ರಹೀಮ್‌ನಲ್ಲಿ ಸೋದರನನ್ನು ಕಂಡ ಸುಗುಣ ಶೆಟ್ಟಿ
32 ವರ್ಷಗಳಿಂದ ತಪ್ಪದ ರಾಖಿಯ ಉಡುಗೊರೆ

ಈ ವರ್ಷ ದೇಶಾದ್ಯಂತ ರಕ್ಷಾಬಂಧನವನ್ನು ಆಗಸ್ಟ್ 24ರಂದು ಆಚರಿಸಲಾಗುತ್ತಿದೆ. ಒಬ್ಬ ಸಹೋದರಿಯಿಂದ ಅಂಚೆಯಲ್ಲಿ ನಾನು ರಾಖಿ ಸ್ವೀಕರಿಸಿದ್ದೇನೆ. ಕಳೆದ 32 ವರ್ಷಗಳಿಂದ ಒಂದು ಬಾರಿಯೂ ತಪ್ಪಿಸದೇ ಆಕೆ ರಾಖಿ ಕಳುಹಿಸುತ್ತಲೇ ಇದ್ದಾರೆ. ಅದುವೇ ಈ ಪೋಸ್ಟ್ ಬರೆಯಲು ನನಗೆ ಸ್ಫೂರ್ತಿ.
1976ರಿಂದ 79ರ ವರೆಗೆ ನಾನು ಹುಟ್ಟೂರು ಬಜ್ಪೆಯಿಂದ ಗುರುಪುರಕ್ಕೆ ಹೋಗುವ ರಸ್ತೆಯ ಕೈಕಂಬ ಜಂಕ್ಷನ್‌ನಲ್ಲಿ ವ್ಯಾಪಾರ ಮಾಡುತ್ತಿದ್ದೆ. ನನ್ನ ಅಂಗಡಿ ಇದ್ದ ಕಟ್ಟಡದ ಮಹಡಿಯಲ್ಲಿ, ಕೆ.ಆರ್.ಶೆಟ್ಟಿ ಎಂಬವರ ಸ್ಟುಡಿಯೊ ಇತ್ತು. ಶೆಟ್ಟಿ ಹಾಗೂ ಅವರ ಪತ್ನಿ ಸುಗುಣಾ ಶೆಟ್ಟಿ (ನನಗಿಂತ 3-4 ವರ್ಷ ದೊಡ್ಡವರಾಗಿದ್ದ ಅವರನ್ನು ನಾನು ಅಕ್ಕ ಎಂದು ಕರೆಯುತ್ತಿದ್ದೆ) ಮತ್ತು ಮಗಳು (ಆಗ ಏಳು ವರ್ಷದವಳಿದ್ದ ಗೀತಾಂಜಲಿ) ಅಲ್ಲಿಗೆ ಪಕ್ಕದ ಮನೆಯಲ್ಲಿ ವಾಸವಿದ್ದರು. ನನ್ನ ಅಂಗಡಿ ಪಕ್ಕ ಒಂದು ಬಾಡಿಗೆ ಕೊಠಡಿಯಲ್ಲಿ ನನ್ನ ವಾಸ. ವಾರಕ್ಕೊಮ್ಮೆ ಬಜ್ಪೆಗೆ ಹೋಗುತ್ತಿದ್ದೆ. ನೆರೆಯವರಾಗಿದ್ದರಿಂದ ಈ ಕುಟುಂಬಕ್ಕೆ ನಾನು ಆಪ್ತನಾದೆ.
ಅವತ್ತು 1976ರ ಆಗಸ್ಟ್‌ನ ಒಂದು ರವಿವಾರ, ಸುಗುಣಾ ಶೆಟ್ಟಿ ತನ್ನ ಪತಿ ಹಾಗೂ ಮಗಳೊಂದಿಗೆ ನನ್ನ ಕೊಠಡಿಗೆ ಹೂವು- ಹಣ್ಣು ಇದ್ದ ಹರಿವಾಣದೊಂದಿಗೆ ಹಠಾತ್ತನೇ ಬಂದದ್ದು ಇನ್ನೂ ನನಗೆ ನೆನಪಿದೆ. ಬಂದವರೇ ಬಲಗೈ ಮುಂದೆ ಚಾಚುವಂತೆ ನನಗೆ ಹೇಳಿದರು. ಏನಾಗುತ್ತಿದೆ ಎಂದು ನಾನು ಅಚ್ಚರಿಪಡುತ್ತಿರುವಾಗಲೇ ನನ್ನ ಕೈಗೆ ರಾಖಿ ಕಟ್ಟಿ, “ಇನ್ನು ಜೀವನ ಪರ್ಯಂತ ನೀನು ನನ್ನ ಸಹೋದರ” ಎಂದು ಹೇಳಿದರು. ಆಶ್ಚರ್ಯವಾದರೂ ನಾನು ಸ್ವಲ್ಪ ಹೊತ್ತಿನಲ್ಲಿ ಸಾವರಿಸಿಕೊಂಡೆ. ನನಗೆ ಅತೀವ ಸಂತಸವಾಯಿತು. ಅದುವರೆಗೂ ಕಾಲೇಜಿನಲ್ಲಿ ರಾಖಿ ಕಟ್ಟಲು ಮುಂದಾಗುತ್ತಿದ್ದ ಹುಡುಗಿಯರ "ರಕ್ಷಾಬಂಧನದಿಂದ" ತಪ್ಪಿಸಿಕೊಂಡು ಓಡುತ್ತಿದ್ದುದಷ್ಟೇ ನನಗೂ ರಾಖಿಗೂ ಇದ್ದ ನಂಟು. ನನ್ನ ಕೊಠಡಿಯಲ್ಲೇ ಬಿಟ್ಟು ಹೋಗಿದ್ದ ಹರಿವಾಣದಲ್ಲಿ "ಭಯ್ಯಾ ಮೇರೆ ರಾಖಿ ಖೇ ಬಂಧನ್ ಕೋ ನಿಭಾನಾ" ಎಂಬ ಪುಟ್ಟ ಮುದ್ರಿತ ಕಾರ್ಡ್ ಒಂದು ನನ್ನ ಗಮನ ಸೆಳೆಯಿತು.
1979ರ ಜುಲೈನಲ್ಲಿ ನನಗೆ ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಕೆಲಸ ಸಿಕ್ಕಿದ್ದರಿಂದ ಕೈಕಂಬ ಬಿಟ್ಟೆ. ಆಗಸ್ಟ್‌ನಲ್ಲಿ ನನಗೆ ಅಕ್ಕನಿಂದ ಮೊಟ್ಟಮೊದಲ ಬಾರಿಗೆ ಅಂಚೆ ಮೂಲಕ ರಾಖಿ ಬಂತು. ಈ ಸಂಪ್ರದಾಯ 32 ವರ್ಷದಿಂದ ನಡೆದುಕೊಂಡು ಬಂದಿದೆ. ಯಾವ ಕವರಿಂಗ್ ಲೆಟರ್ ಕೂಡಾ ಇಲ್ಲದೇ ಕವರ್‌ನಲ್ಲಿ ರಾಖಿ ಬರುತ್ತದೆ. ಯಾವುದೇ ಭಾವನಾತ್ಮಕ ಬರಹಗಳಾಗಲೀ, ಕನಿಷ್ಠ ಕಳುಹಿಸಿದವರ ವಿಳಾಸವೂ ಇರುವುದಿಲ್ಲ. ಆದರೆ ಅದೇ ಕಳುಹಿಸಿದಾಕೆಯ ಭಾವನೆಗಳ ಸರಣಿಯ ಕಥೆ ಹೇಳುತ್ತದೆ.
ಪ್ರತಿ ಬಾರಿ ರಾಖಿ ಸ್ವೀಕರಿಸಿದಾಗಲೂ ನಾನು ಮೂರು ಸಾಲಿನ ಕೃತಜ್ಞತಾ ಪತ್ರವನ್ನು ಆಕೆಗೆ ಕಳುಹಿಸುತ್ತೇನೆ. ಅದಕ್ಕೂ ಇಂದಿನವರೆಗೆ ಎಂದೂ ಉತ್ತರ ಬಂದಿಲ್ಲ.
ಕಳೆದ 32 ವರ್ಷಗಳಲ್ಲಿ ಎರಡು ಅಥವಾ ಮೂರು ಬಾರಿ ಫೋನ್ ಮೂಲಕ ಪರಸ್ಪರ ಮಾತನಾಡಿದ್ದೇವೆ. ಬಹುಶಃ ಅವರ ಮಕ್ಕಳ ಮದುವೆಯಂಥ ಸಂದರ್ಭದಲ್ಲಿ ಅಷ್ಟೇ ಬಾರಿ ಭೇಟಿಯಾಗಿದ್ದೇವೆ.
ಹೌದು. 1992ರಲ್ಲಿ ಅವರ ಮಗಳು ಗೀತಾ ಮದುವೆ ಸಂದರ್ಭದ ಆರತಕ್ಷತೆಯ ನೇತೃತ್ವ ವಹಿಸುವಂತೆ ನನ್ನನ್ನು ಕೋರಿದ್ದರು. ಸಾಮಾನ್ಯವಾಗಿ ಆ ಗೌರವ ಮದುಮಗಳ ಸೋದರಮಾವನಿಗೆ ಇರುತ್ತದೆ. ನಾನು ನಿರಾಕರಿಸಿದಾಗ, ಕಣ್ಣೀರು ತುಂಬಿಕೊಂಡ ಅಕ್ಕ ಕಿವಿಯಲ್ಲಿ ಏನೋ ಪಿಸುಗುಟ್ಟಿದರು. ನನಗದು ಕೇಳಿಸಲಿಲ್ಲ. ಆದರೆ ನನ್ನ ಅಂತರಂಗಕ್ಕೆ ತಿಳಿದಂತೆ, "ಭಯ್ಯಾ, ಮೇರೆ ರಾಖಿ ಖೇ ಬಂಧನ್ ಕೋ ನಿಭಾನಾ" ಎಂದು ಹೇಳಿರಬಹುದು ಎಂದುಕೊಂಡೆ. ನಾನು ಪ್ರಾಮಾಣಿಕವಾಗಿ ಆ ಜವಾಬ್ದಾರಿ ಒಪ್ಪಿಕೊಂಡೆ. ಹೊಗಳಿಕೆ ಹಾದುಹೋಗುತ್ತದೆ; ಪ್ರೀತಿ ಉಳಿಯುತ್ತದೆ.
ಪ್ರತಿ ಸಲದಂತೆ ಈ ಬಾರಿಯೂ ನಾನು ನನ್ನ ರಾಖಿ ಸಹೋದರಿಗೆ ಮೂರು ಸಾಲಿನ ಪತ್ರ ಕಳುಹಿಸಿದ್ದೇನೆ. "ಸಹೋದರಿ, ವಿನಾಕಾರಣ ಪರಸ್ಪರ ದ್ವೇಷ ಮಾಡುವ ಜನರು ಇರುವ ಈ ಜಗತ್ತಿನಲ್ಲಿ, ಕಾರಣವಿಲ್ಲದೇ ನನ್ನನ್ನು ಪ್ರೀತಿಸುವವರನ್ನು ಪಡೆದ ಭಾಗ್ಯ ನನ್ನದು. ಈ ಪತ್ರ ನಿಮ್ಮ ಕೈಸೇರುವುದಿಲ್ಲ ಎನ್ನುವುದು ನನಗೆ ಗೊತ್ತು. ನನಗೆ ಅದು ಬೇಕಾಗಿಯೂ ಇಲ್ಲ. ಆದರೆ ನಾನು ಹೇಳುವುದು ಇಷ್ಟೇ; ನಿಮ್ಮಂಥ ಜನರಿಂದಾಗಿ, ಈ ಜಗತ್ತು ವಾಸಕ್ಕೆ ಯೋಗ್ಯ ಸ್ಥಳವಾಗಿದೆ. ದೇವರು ನಿಮ್ಮನ್ನು ಹಾಗೂ ಕುಟುಂಬವನ್ನು ಹರಸಲಿ"
ಈ ನಿರ್ದಿಷ್ಟ ಪ್ರಕರಣದ ಹೊರತಾಗಿ, ರಾಖಿ ಹಬ್ಬಕ್ಕೆ ಮತ್ತು ಅದರ ಆಚರಣೆಗೆ ನಾನು ವೈಯಕ್ತಿಕವಾಗಿ ಹೆಚ್ಚು ಮಹತ್ವ ನೀಡುವುದಿಲ್ಲ. ಶಿಷ್ಟಾಚಾರಕ್ಕಾಗಿ ನಾನು ಆ ಬಳಿಕ ಜೀವನದಲ್ಲಿ ಹಲವು ರಾಖಿ ಸ್ವೀಕರಿಸಿದ್ದೇನೆ. ಆದರೆ ಯಾರಿಂದಲೂ ಕೈಗೆ ರಾಖಿ ಕಟ್ಟಿಸಿಕೊಂಡಿಲ್ಲ ಅಥವಾ ಅಂಥ ರಾಖಿಗಳನ್ನು ನಾನು ಕಟ್ಟಿಕೊಂಡಿಲ್ಲ. ನನ್ನ ಧಾರ್ಮಿಕ ನಂಬಿಕೆಯ ಹೊರತಾಗಿಯೂ, ರಕ್ಷಾಬಂಧನ ಹೊಂದಿರುವ ಭಾವನೆಗಳನ್ನು ನಾನು ಗೌರವಿಸಿದ್ದೇನೆ; ಗೌರವಿಸುತ್ತೇನೆ.
* ಈ ಬ್ಲಾಗ್ ಪೋಸ್ಟ್ 2010ರ ಆಗಸ್ಟ್ 27ರಂದು ಬರೆದದ್ದು. ಕೆ.ಆರ್.ಶೆಟ್ಟಿ, 2014ರ ಅಕ್ಟೋಬರ್ 12ರಂದು ನಿಧನರಾದರು. ಗೀತಾಂಜಲಿ (ಗೀತಾ) ಮಸ್ಕತ್‌ನಲ್ಲಿ ನೆಲೆಸಿದ್ದಾರೆ. ಅಕ್ಕ (ಸುಗುಣಾ ಶೆಟ್ಟಿ) ಆಕೆಯೊಂದಿಗೆ ಇದ್ದಾರೆ. ಮಸ್ಕತ್‌ನಿಂದ ಇಂದು ಅಕ್ಕನ ರಾಖಿಯನ್ನು ಅಂಚೆ ಮೂಲಕ ಸ್ವೀಕರಿಸಿದ್ದರಿಂದ ಮತ್ತೆ ಈ ಪೋಸ್ಟ್ ಶೇರ್ ಮಾಡಬೇಕು ಎನಿಸಿತು.
ರಹೀಮ್ ಟೀಕೆ
ಇದು ರಹೀಂ ಟೀಕೆಯವರ ಇಂಗ್ಲಿಷ್ ಬರಹದ ಅನುವಾದ.







