ಸ್ವದೇಶೀಕರಣ: ಫ್ಯಾನ್ಸಿ,ವಾಚ್, ಸ್ಟೇಶನರಿ ಅಂಗಡಿಗಳಾಗಿ ಬದಲಾಗುತ್ತಿವೆ ಮೊಬೈಲ್ ಅಂಗಡಿಗಳು

ರಿಯಾದ್, ಆಗಸ್ಟ್ 18: ಸೆಪ್ಟಂಬರ್ ಮೂರರ ನಂತರ ಮೊಬೈಲ್ ಅಂಗಡಿಗಳಲ್ಲಿನ ಎಲ್ಲ ಕೆಲಸಗಾರರು ಸೌದಿಪ್ರಜೆಗಳಾಗಿರಬೇಕೆಂದು ಕಠಣ ಕಾನೂನು ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಅದರಿಂದ ಪಾರಾಗಲು ಹಲವರು ತಮ್ಮ ಮೊಬೈಲ್ ಅಂಗಡಿಗಳ ಲೈಸನ್ಸನ್ನು ಬದಲಾಯಿಸಿ ಇಲೆಕ್ಟ್ರಾನಿಕ್ಸ್ ಅಂಗಡಿಯ ಲೈಸನ್ಸ್ ಪಡೆಯತೊಡಗಿದ್ದಾರೆಂದು ವರದಿಯಾಗಿದೆ. ಇಲೆಕ್ಟ್ರಾನಿಕ್ಸ್, ವಾಚ್, ಫ್ಯಾನ್ಸಿ,ಸ್ಟೇಶನರಿ ಅಂಗಡಿಗಳಾಗಿ ಮೊಬೈಲ್ ಅಂಗಡಿಗಳು ರೂಪಾಂತರಗೊಳ್ಳುತ್ತಿದ್ದು, ಹೆಸರು ಬದಲಾಯಿಸಿದ ಅಂಗಡಿಗಳಿಂದ ಮೊಬೈಲ್ ಫೋನ್‌ಗಳು ಮರೆಯಾಗಿವೆ. ಅವುಗಳ ಬದಲಾಗಿ ಫ್ಯಾನ್ಸಿ ವಸ್ತುಗಳು, ವಾಚ್, ಟಾರ್ಚ್ ಮುಂತಾದ ಇಲೆಕ್ಟ್ರಾನಿಕ್ ವಸ್ತುಗಳು ಪ್ರತ್ಯಕ್ಷವಾಗಿವೆ.
ಜೂನ್‌ನಂತರ ಮೊಬೈಲ್ ಅಂಗಡಿಗಳಲ್ಲಿ ಅರ್ಧಾಂಶ ಕೆಲಸಗಾರರು ಸೌದಿಪ್ರಜೆಗಳಿರಬೇಕೆಂದು ಸೌದಿ ಕಾರ್ಮಿಕ ಸಚಿವಾಲಯ ಆದೇಶವಿತ್ತು. ಇದನ್ನು ಹಲವು ಮೊಬೈಲ್ ಅಂಗಡಿಗಳು ಜಾರಿಗೆ ತಂದಿದ್ದವು. ಆದರೆ ಅದರಿಂದ ವಿದೇಶಿ ಉದ್ಯೋಗಿಗಳಿಗೆ ಅಂತಹ ತೊಂದರೆ ಆಗಿರಲಿಲ್ಲ.ಆದರೆ ಮುಂದಿನ ತಿಂಗಳಿಂದ ಮೊಬೈಲ್ ಅಂಗಡಿಗಳಲ್ಲಿ ಸಂಪೂರ್ಣ ಸೌದಿ ಪ್ರಜೆಗಳೇ ಉದ್ಯೋಗಿಗಳಾಗಿರಬೇಕೆಂಬ ಕಠಿಣ ಕಾನೂನು ಜಾರಿಗೆ ಬರಲಿದ್ದು, ಇದು ವಿದೇಶಿ ಉದ್ಯೋಗಿಗಳಲ್ಲಿ ಆತಂಕ ಸೃಷ್ಟಿಸಿದೆ.
ಸೌದಿಉದ್ಯೋಗಿಗಳಿಲ್ಲದಿದ್ದರೆ ಮೊಬೈಲ್ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ. ಒಂದುವೇಳೆ ಲೈಸನ್ಸ್ ಬದಲಾಯಿಸಿದ ಅಂಗಡಿಗಳು ಕಾನೂನು ಪ್ರಕಾರ ಮೊಬೈಲ್‌ಫೋನ್ ಮಾರಲು ರಿಪೇರಿ ಮಾಡುವ ಹಾಗಿಲ್ಲ. ಸೆಪ್ಟಂಬರ್‌ನಂತರ ಈ ಕುರಿತು ಕಠಿಣ ತಪಾಸಣೆ ಆರಂಭಗೊಳ್ಳಲಿದೆ. ತಪ್ಪಿತಸ್ಥರೆಂದು ಕಂಡು ಬಂದವರಿಗೆ ದಂಡ ಹಾಗೂ ಗಡಿಪಾರು ಶಿಕ್ಷೆ ವಿಧಿಸಲಾಗತ್ತದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ. ರೆಂಟ್ ಎ ಕಾರ್, ವಾಹನ ಮಾರಾಟ ಮುಂತಾದ ಇತರ ಕ್ಷೇತ್ರಗಳಲ್ಲಿಯೂ ಸೌದೀಕರಣ ಜಾರಿಗೆ ತರಲಾಗುವುದು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.







