ಹೈಕೋರ್ಟ್‌ನಿಂದ ವಿಶೇಷ ತನಿಖಾ ತಂಡ ರಚನೆಗೆ ಆಗ್ರಹ
ವಿನಾಯಕ ಬಾಳಿಗ ಕೊಲೆ ಪ್ರಕರಣದ ತನಿಖೆಯಲ್ಲಿ ಹಿನ್ನಡೆ, ಸಾಕ್ಷ ನಾಶದ ಆರೋಪ

ಮಂಗಳೂರು,ಆ.18: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದಲೇ ಪ್ರಮುಖ ಸಾಕ್ಷವನ್ನು ನಾಶಪಡಿಸಿರುವ ಬಗ್ಗೆಯೂ ಸಂಶಯವಿರುವ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ರಾಜ್ಯ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೊಳಪಡಿಸಬೇಕು ಎಂದು ಬಾಳಿಗಾರ ಕುಟುಂಬ ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ವಿಚಾರವಾದಿಗಳ ಸಂಘಟನೆಯ ಅಧ್ಯಕ್ಷ ಡಾ.ನರೇಂದ್ರ ನಾಯಕ್, ಈ ಕುರಿತಂತೆ ಈಗಾಗಲೇ ವಿನಾಯಕ ಬಾಳಿಗಾರ ಕುಟುಂಬ ಹೈಕೋರ್ಟ್‌ಗೆ ವಿಶೇಷ ತನಿಖಾ ತಂಡ ರಚನೆಗೆ ಆಗ್ರಹಿಸಿ ಮನವಿ ಅರ್ಜಿ ಸಲ್ಲಿಸಿದೆ ಎಂದು ಹೇಳಿದರು.
ಮಾರ್ಚ್ 21ರಂದು ವಿನಾಯಕ ಬಾಳಿಗಾರ ಕೊಲೆ ನಡೆದು, ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಕಳೆದೆರಡು ತಿಂಗಳುಗಳಿಂದ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬರುತ್ತಿಲ್ಲ ಎಂದು ಅವರು ದೂರಿದರು.
ವಿನಾಯಕ ಬಾಳಿಗರು ದೇವಸ್ಥಾನ ಹಾಗೂ ಕಾಶೀ ಮಠಕ್ಕೆ ಬರೆದಿದ್ದ ಕೆಲವೊಂದು ಪತ್ರಗಳು ಮಾಯವಾಗಿವೆ. ವಿನಾಯಕ ಬಾಳಿಗಾರ ಮನೆಯವರಿಂದ ಇದನ್ನು ಕೊಂಡೊಯ್ದ ಪೊಲೀಸ್ ಸಿಬ್ಬಂದಿಯೇ ಈ ಪ್ರಮುಖ ಸಾಕ್ಷವನ್ನು ನಾಶ ಮಾಡಿರುವ ಬಗ್ಗೆ ಅನುಮಾನವಿದೆ. ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರ ಮುತುವರ್ಜಿಯಲ್ಲಿ ಪ್ರಕರಣ ಈ ಹಂತಕ್ಕೆ ತಲುಪಲು ಕಾರಣವಾಗಿದೆ. ಆದರೆ ಕೆಳ ಮಟ್ಟದ ಕೆಲ ಪೊಲೀಸ್ ಸಿಬ್ಬಂದಿಯಿಂದಾಗಿ ಪ್ರಕರಣವನ್ನು ತಳಹಿಡಿಸುವ ಪ್ರಯತ್ನವೂ ಸಾಗಿರುವ ಬಗ್ಗೆ ನಮಗೆ ಬಲವಾದ ಸಂಶಯವಿದೆ. ಅದಕ್ಕೆ ಕಾರಣ. ಪ್ರಮುಖ ಆರೋಪಿ ನರೇಶ್ ಶೆಣೈ ಬಂಧನವಾಗಿ ಎರಡು ತಿಂಗಳಾದರೂ ಪ್ರಕರಣದ ಪ್ರಮುಖ ರೂವಾರಿಗಳು, ಆರೋಪಿಗಳಿಗೆ ಸಹಕರಿಸಿದವರ ಬಗ್ಗೆ ಯಾವುದೇ ಮಾಹಿತಿ ಇನ್ನೂ ಬೆಳಕಿಗೆ ಬಂದಿಲ್ಲ. ಈ ನಿಟ್ಟಿನಲ್ಲಿ ತನಿಖೆ ಯಾವ ಹಂತದಲ್ಲಿ ಸಾಗುತ್ತಿದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ ಎಂದವರು ಹೇಳಿದರು.
2012ರಲ್ಲಿ ನಡೆದ ಮಹೇಶ್ ಪ್ರಭು ಕೊಲೆ ಹಾಗೂ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೂ ಸಂಬಂಧ ಇದೆ. ಆ ಪ್ರಕರಣದಲ್ಲೂ ನರೇಶ್ ಶೆಣೈ ಪಾತ್ರ ಇರುವುದು ಇದ್ದು, ಆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ಅಂತ್ಯಗೊಂಡು ಅದರ ಪ್ರಮುಖ ಆರೋಪಿ ನಂದ ಕುಮಾರ್ ಪ್ರಭು ಖುಲಾಸೆಗೊಂಡಿದ್ದಾನೆ. ಅದು ಈ ಪ್ರಕರಣದಲ್ಲಿ ಆರೋಪಿಗಳಿಗೆ ಮತ್ತಷ್ಟು ಧೈರ್ಯ ತುಂಬಿರುವಂತಿದೆ. ಅದೇ ರೀತಿಯಲ್ಲಿ ಈ ಕೊಲೆ ಪ್ರಕರಣವೂ ನಡೆದಿರುವುದು ಕಂಡು ಬರುತ್ತಿರುವುದರಿಂದ ಆ ಪ್ರಕರಣವನ್ನು ಮರು ತನಿಖೆಗೊಳಪಡಿಸಬೇಕು ಎಂದು ಡಾ. ನರೇಂದ್ರ ನಾಯಕ್ ಆಗ್ರಹಿಸಿದರು.
ತಾನು ಮುಗ್ಧ ಎಂದು ಹೇಳುತ್ತಿರುವ ಬಂಧಿತ ಆರೋಪಿ ನರೇಶ್ ಶೆಣೈ, ಮಂಪರು ಪರೀಕ್ಷೆಗೆ ಒಪ್ಪದಿರುವುದು ಪ್ರಕರಣದ ಸಂಚಿನ ಹಿಂದಿರುವವರನ್ನು ರಕ್ಷಿಸುವ ಉದ್ದೇಶದಿಂದ ಎಂಬುದು ಸ್ಪಷ್ಟವಾಗುತ್ತಿದೆ. ವಿನಾಯಕ ಬಾಳಿಗಾರ ವೃದ್ಧೆ ತಾಯಿ, ಅವಿವಾಹಿತ ಸಹೋದರಿಯರು ನಿತ್ಯವೂ ಭಯದ ನೆರಳಿನಲ್ಲೇ ಜೀವನ ಸಾಗಿಸುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿನಾಯಕ ಬಾಳಿಗಾ ಹತ್ಯೆ ನಾಲ್ಕೈದು ಮಂದಿ ಸೇರಿ ಮಾಡಿರುವ ಕೃತ್ಯವಾಗಿದ್ದು, ಪ್ರಕರಣದಲ್ಲಿ ಕಾಶೀ ಮಠದ ಇಬ್ಬರ ಹೆಸರು ಉಲ್ಲೇಖಗೊಂಡಿತ್ತು. ಆದರೆ ಆ ದಿಶೆಯಲ್ಲಿ ತನಿಖೆ ನಡೆದಂತೆ ಕಂಡುಬರುತ್ತಿಲ್ಲ. ಆರೋಪಿ ನರೇಶ್ ಶೆಣೈ ಪರ ಮೂರು ಬಾರಿ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿರುವ ಕುರಿತು, ಕೊಲೆ ನಡೆದು ಸುಮಾರು ಮೂರು ತಿಂಗಳ ಕಾಲ ಆತ ತಲೆಮರೆಸಿಕೊಂಡಿದ್ದ ಸಂದರ್ಭ ಆತನಿಗೆ ನೆರವು ನೀಡಿದವರ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ. ಸ್ಥಳೀಯ ಪೊಲೀಸರು ಪ್ರಕರಣ ತಳ ಹಿಡಿಯುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿರುವ ಅನುಮಾನ ಕಾಡುತ್ತಿದೆ. ಎಸಿಪಿ ತಿಲಕ್‌ಚಂದ್ರ ತನಿಖಾಧಿಕಾರಿಯಾಗಿದ್ದ ವೇಳೆ ಪ್ರಕರಣದ ತನಿಖೆ ಚುರುಕಾಗಿ ಸಾಗಿತ್ತು. ಆ ಬಳಿಕ ಮತ್ತೆ ಕುಂಟುತ್ತಾ ಸಾಗಿದೆ ಎಂದು ನರೇಂದ್ರ ನಾಯಕ್ ಹೇಳಿದರು.
ದಲಿತ ಸಂಘರ್ಷ ಸಮಿತಿಯ ರಘು ಎಕ್ಕಾರು, ಡಿವೈಎಫ್‌ಐನ ಸಂತೋಷ್ ಕುಮಾರ್ ಬಜಾಲ್, ಆರ್‌ಟಿಐ ಕಾರ್ಯಕರ್ತ ಗಣೇಶ್ ಬಾಳಿಗಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮಾರ್ಚ್ ಮೊದಲ ವಾರ, ಡಿಸೆಂಬರ್‌ನಲ್ಲಿ ಬರೆದ ಪತ್ರಗಳು ನಾಪತ್ತೆ!
ವಿನಾಯಕ ಬಾಳಿಗಾರವರು ಕೊಲೆಗೀಡಾದ ಮಾರ್ಚ್ ತಿಂಗಳ ಪ್ರಥಮ ವಾರದಲ್ಲಿ ಕಾಶೀ ಮಠದ ಮುಖ್ಯಸ್ಥರು ಸರಿ ಇಲ್ಲ ಎಂಬ ಬಗ್ಗೆ ಪತ್ರವೊಂದನ್ನು ಬರೆದಿದ್ದರು. ಆ ಬಗ್ಗೆ ಪೊಲೀಸ್ ತನಿಖೆ ನಡೆದಿರುವಂತೆ ಕಾಣುತ್ತಿಲ್ಲ. ಅದಕ್ಕೆ ಮುಂಚಿತವಾಗಿ ಡಿಸೆಂಬರ್‌ನಲ್ಲಿ ವೆಂಕಟರಮಣ ದೇವಸ್ಥಾನಕ್ಕೆ ಬರೆದ ಪತ್ರದಲ್ಲಿ ರಥೋತ್ಸವ ಸಮಯ ಸಾಕಷ್ಟು ಆಹಾರ ವ್ಯರ್ಥವಾಗುತ್ತದೆ. ರಥೋತ್ಸವದ ಸಂದರ್ಭ ಸಂಗ್ರಹವಾದ ಸಾಕಷ್ಟು ಹಣವನ್ನು ಮಠದ ಸ್ವಾಮೀಜಿಗೆ ನೇರವಾಗಿ ಹಸ್ತಾಂತರಿಸಲಾಗುತ್ತದೆ. ಅದನ್ನು ಸಾರ್ವಜನಿಕವಾಗಿ ಲೆಕ್ಕ ಮಾಡಿ ಚೆಕ್ ಮೂಲಕ ಹಸ್ತಾಂತರಿಸಬೇಕು ಎಂದು ತಿಳಿಸಿದ್ದರು. ಆದರೆ ಆ ಎರಡೂ ಪತ್ರಗಳೂ ನಾಪತ್ತೆಯಾಗಿವೆ. ಕೊಲೆಯ ಬಳಿಕ ಮನೆಯವರಿಂದ ಬಾಳಿಗಾರ ದಾಖಲೆ ಪತ್ರ ಸೇರಿದಂತೆ ಈ ಪತ್ರಗಳನ್ನು ಕೊಂಡೊಯ್ದ ಪೊಲೀಸರನ್ನು ತನಿಖೆಗೊಳಪಡಿಸಬೇಕು ಎಂದು ಡಾ. ನರೇಂದ್ರ ನಾಯಕ್ ಆಗ್ರಹಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಪೊಲೀಸರು ತನಿಖೆಗೊಳಪಡಿಸಿದರು ಎಂಬುದಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ದೊಡ್ಡ ವಿಷಯವಾಗಿಸಿ, ಆ ಸಮುದಾಯದವರು ಪ್ರತಿಭಟನೆ, ಮನವಿಗೆ ಮಂದಾಗಿದ್ದರು. ಆದರೆ ಜಿಎಸ್‌ಬಿ ಸಮುದಾಯಕ್ಕೆ ಸೇರಿದ, ಆರ್‌ಟಿಐ ಕಾರ್ಯಕರ್ತನ ಕೊಲೆಯಾಗಿದ್ದರೂ ಈವರೆಗೆ ಸಮುದಾಯದ ನಾಯಕರು ಯಾರೂ ಪ್ರಕರಣದ ತನಿಖೆಗೆ ಮಾತನಾಡಿಲ್ಲ. ಇವೆಲ್ಲವೂ ಸಮುದಾಯದ ಪ್ರಮುಖ ನಾಯಕರೇ ಆರೋಪಿಗಳನ್ನು ರಕ್ಷಿಸಲು ಸಹಕರಿಸುತ್ತಿರುವ ಬಗ್ಗೆ ಅನುಮಾನ ಹುಟ್ಟು ಹಾಕಿದೆ ಎಂದು ನರೇಂದ್ರ ನಾಯಕ್ ಆಪಾದಿಸಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಾ. ನರೇಂದ್ರ ನಾಯಕ್, ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಹೊರಗಿನ ಪೊಲೀಸ್ ಅಧಿಕಾರಿಗಳ ವಿಶೇಷ ತನಿಖಾ ತಂಡ ತನಿಖೆಗೂ ನಮ್ಮ ಅಭ್ಯಂತರವಿಲ್ಲ. ಆಯುಕ್ತ ಚಂದ್ರಶೇಖರ್ ಅವರು ಈ ಪ್ರಕರಣದಲ್ಲಿ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ, ಆ ಬಗ್ಗೆ ನಮಗೆ ಅವರ ಬಗ್ಗೆ ಗೌರವವಿದೆ ಎಂದು ಹೇಳಿದರು.
ಸಮುದಾಯದ ಯಾರೂ ನಮ್ಮ ನೆರವಿಗೆ ಬಂದಿಲ್ಲ!
ಪ್ರಕರಣದ ನಡೆದು ಇಷ್ಟರವರೆಗೂ ನಮ್ಮ ಸಮುದಾಯದ ಯಾರೊಬ್ಬರೂ ನಮಗೆ ಸಾಂತ್ವಾನ ಹೇಳಲು ಮುಂದೆ ಬಂದಿಲ್ಲ ಎಂದು ವಿನಾಯಕ ಬಾಳಿಗಾರ ಸಹೋದರಿ ಹರ್ಷಾ ಬಾಳಿಗಾ ಬೇಸರಿಸಿದರು.







