ಬಿಜೆಪಿಗೂ- ಸಂಘಕ್ಕೂ ಸಂಬಂಧವೇ ಇಲ್ಲ!
ಯಡಿಯೂರಪ್ಪ ಅಭಿಮಾನಿಗಳ ಸಂಘದ ಸ್ಪಷ್ಟನೆ

ಮಂಗಳೂರು,ಆ.18: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತತ್ವ ಸಿದ್ಧಾಂತ, ಚಿಂತನೆಗಳನ್ನು ಒಪ್ಪಿಕೊಂಡು ಮತ್ತು ಸಮಾಜ ಸೇವೆಯ ಉದ್ದೇಶದೊಂದಿಗೆ ಅಖಿಲ ಭಾರತ ಯಡಿಯೂರಪ್ಪ ಅಭಿಮಾನಿಗಳ ಸಂಘ ಅಸ್ತಿತ್ವಕ್ಕೆ ಬಂದಿದೆ. ಆದರೆ ಬಿಜೆಪಿ ಪಕ್ಷಕ್ಕೂ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಜ್ ಅರಸೀಕೆರೆ ಹೇಳಿದರು.
ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ರಾಜಕೀಯರಹಿತ ಸಂಸ್ಥೆಯಾಗಿದ್ದು, ಯಾರೂ ಕೂಡಾ ಸದಸ್ಯರಾಗಬಹುದು. ನೋಂದಾಯಿತ ಸಂಸ್ಥೆಯಾಗಿದ್ದ ಈ ಸಂಘಟನೆ ದ.ಕ. ಸೇರಿದಂತೆ ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಸಮಿತಿ ಆಯ್ಕೆ ನಡೆಯುತ್ತಿದೆ.ಬಿಜೆಪಿ ಕಾರ್ಯಕರ್ತರು ಈ ಸಂಘದ ಸದಸ್ಯರಾಗಲು ಅವಕಾಶವಿದ್ದು, ಈಗ ಇರುವ ಸದಸ್ಯರಲ್ಲಿ ಶೇ.20ಮಂದಿ ಬಿಜೆಪಿ ಸದಸ್ಯರಿದ್ದಾರೆ ಎಂದರು.
ಜನಪರ ಕಾಳಜಿಯೊಂದಿಗೆ ರಾಜ್ಯದ ರೈತರ ಸಂಕಷ್ಟಗಳಿಗೆ ಸ್ಪಂದಿಸುವುದು ಮೊದಲ ಆದ್ಯತೆ. ಉಳಿದಂತೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ, ವೃದ್ಧಾಶ್ರಮಗಳಿಗೆ ಸಹಾಯ ನೀಡುವುದು ಸಂಘದ ಉದ್ದೇಶ. ಯಡಿಯೂರಪ್ಪ ಸಿಎಂ ಆದಾಗ ಮಾಡಿದ ಸಾಧನೆ, ಅವರ ವಿರುದ್ಧ ಅಪಪ್ರಚಾರಗಳಿಗೆ ದಿಟ್ಟ ಉತ್ತರ ನೀಡುವ ನಿಟ್ಟಿನಲ್ಲಿ ಈ ಸಂಸ್ಥೆ ಸ್ಥಾಪನೆ ಮಾಡಲಾಗಿದ್ದು, ಈಗಾಗಲೇ ೇಸ್‌ಬುಕ್, ವಾಟ್ಸ್ ಆಪ್, ಟ್ವಿಟ್ಟರ್ ಹಾಗೂ ಯೂಟ್ಯೂಬ್‌ಗಳಲ್ಲಿ ಸಂಸ್ಥೆಯ ಕಾರ್ಯಶೈಲಿ ಮೆಚ್ಚುಗೆಗಳಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ವಿ. ಪಾಟೇಲ್, ಮಾಧ್ಯಮ ಸಲಹೆಗಾರ ಕೆ.ಬಿ. ನರೇಂದ್ರ, ರಾಜ್ಯ ಉಪಾಧ್ಯಕ್ಷ ಚಂದನ್ ರೈ ಪುತ್ತೂರು, ದ.ಕ. ಜಿಲ್ಲಾಧ್ಯಕ್ಷ ದಯಾನಂದ ತೊಕ್ಕೊಟ್ಟು ಉಪಸ್ಥಿತರಿದ್ದರು.







