ಆ.21ರಂದು ಕೊಂಕಣಿ ಮಾನ್ಯತಾ ದಿವಸ್ ಆಚರಣೆ

ಮಂಗಳೂರು, ಆ.18: ಕೊಂಕಣಿ ಭಾಷಾ ಮಂಡಳ ಕರ್ನಾಟಕ, ಮಂಗಳೂರು ಲಯನ್ಸ್, ಲಯನೆಸ್, ಲಿಯೋ ಕ್ಲಬ್, ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ ಇವುಗಳ ಸಹಯೋಗದಲ್ಲಿ ಆ.21ರಂದು ನಗರದ ಡಾನ್ ಬಾಸ್ಕೋ ಸಭಾಂಗಣದಲ್ಲಿ ‘ಕೊಂಕಣಿ ಮಾನ್ಯತಾ ದಿವಸ್-2016’ ಕಾರ್ಯಕ್ರಮ ಆಯೋಜಿಸಲಾಗಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷೆ ಗೀತಾ ಸಿ. ಕಿಣಿ, ಅಂದು ಅಪರಾಹ್ನ 2 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ಟಲಿನೊ ಉದ್ಘಾಟನೆ ನೆರವೇರಿಸಲಿದ್ದು, ಭಾರತ್ ಗ್ರೂಪ್ ಕಂಪೆನಿಸ್ ಇದರ ಆಡಳಿತ ನಿರ್ದೇಶಕ ಅನಂತ ಜಿ. ಪೈ ಅಧ್ಯಕ್ಷತೆ ವಹಿಸುವರು ಎಂದರು.
ಕಳೆದ ಹಲವು ವರ್ಷದಿಂದ ಈ ಸಂಸ್ಥೆಯು ಶಾಲಾ ಮಕ್ಕಳಿಗೆ ಕೊಂಕಣಿ ಕ್ವಿಜ್‌ನಂತಹ ಸ್ಪರ್ಧೆಗಳನ್ನು ಏರ್ಪಡಿಸಿ ಅವರಲ್ಲಿ ಕೊಂಕಣಿ ಶಬ್ದ ಭಂಡಾರ ಹೆಚ್ಚಿಸುವ ಕೆಲಸ ಮಾಡುತ್ತಾ ಬಂದಿದೆ. ಈ ವರ್ಷ ಸ್ವಲ್ಪ ವಿಭಿನ್ನ ರೀತಿಯಲ್ಲಿ ಮಕ್ಕಳ ಉತ್ಸಾವಹವನ್ನು ಹೆಚ್ಚು ಮಾಡುವ ಉದ್ದೇಶದಿಂದ ವಿವಿಧ ವಿನೋದಾವಳಿ ಸ್ಪರ್ಧೆಯನ್ನು ಶಾಲಾ ಕಾಲೇಜು ಮಕ್ಕಳಿಗಾಗಿ ಏರ್ಪಡಿಸಲಾಗಿದೆ. ಕೊಂಕಣಿ ಸ್ಪರ್ಧೆಯ ಮೂಲಕ ಸಾಹಿತ್ಯವನ್ನು ಬರೆಯುವ ದಿಸೆಯಲ್ಲಿ ಹಾಗೂ ಕಾರ್ಯಕ್ರಮ ನಿರೂಪಣೆ ಮಾಡುವ ನಿಟ್ಟಿನಲ್ಲಿ ಈ ಅವಕಾಶವನ್ನು ಕಲ್ಪಿಸಲಾಗಿದೆ. ಶಾಲಾ ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನವನ್ನು ನೀಡಲಾಗುವುದು. ಜೊತೆಗೆ ಲಕವನ್ನು ಕೂಡ ನೀಡಲಾಗುವುದು ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಚಾಲಕ ಪಿ.ಸುರೇಶ್ ಶೆಣೈ, ಕೊಂಕಣಿ ಭಾಷಾ ಮಂಡಳದ ಕೋಶಾಧಿಕಾರಿ ದಿನೇಶ್ ಕೆ. ಶೇಟ್, ಸಹಕಾರ್ಯದರ್ಶಿ ರತ್ನಾಕರ ಕುಡ್ವ, ಸದಸ್ಯ ವಸಂತ ರಾವ್ ಉಪಸ್ಥಿತರಿದ್ದರು.







