ಪುತ್ತೂರು: ಆ.22-23ರಂದು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ
ಪುತ್ತೂರು, ಆ.18: ಶಿಕ್ಷಣ ಇಲಾಖೆಯಿಂದ ನಡೆಸಲಾಗುತ್ತಿರುವ ಪ್ರತಿಭಾ ಕಾರಂಜಿಯ ತಾಲೂಕು ಮಟ್ಟದ ಸ್ಪರ್ಧಾ ಕಾರ್ಯಕ್ರಮ ಆ.22 ಮತ್ತು 23ರಂದು ಉಪ್ಪಿನಂಗಡಿಯ ಸೈಂಟ್ ಮೇರಿಸ್ ಪ್ರೌಢಶಾಲೆ ಮತ್ತು ಸಂತ ಫಿಲೋಮಿನಾ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಅಧ್ಯಕ್ಷತೆ ವಹಿಸಲಿದ್ದಾರೆ. ಧರ್ಮಗುರು ಡಾ.ಗೀವರ್ಗಿಸ್ ಇವಾನಿಯೋಸ್ ಆಶೀರ್ವಚನ ನೀಡಲಿದ್ದಾರೆ. ಆ.22ರಂದು ಪ್ರಾಥಮಿಕ ಶಾಲಾ ವಿಭಾಗ ಹಾಗೂ ಆ.23ರಂದು ಪ್ರೌಢಶಾಲಾ ವಿಭಾಗದ ಸ್ಪರ್ಧೆಗಳು ನಡೆಯಲಿದೆ. ಪ್ರಾಥಮಿಕ ಶಾಲಾ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ 47 ವೈಯಕ್ತಿಕ ಸ್ಪರ್ಧೆ ಮತ್ತು 10 ಗುಂಪು ಸ್ಪರ್ಧೆಗಳು ನಡೆಯಲಿದೆ. ಪ್ರೌಢಶಾಲಾ ವಿಭಾಗದಲ್ಲಿ 8ರಿಂದ 10ನೆ ತರಗತಿಗೆ 21 ವೈಯಕ್ತಿಕ ಸ್ಪರ್ಧೆಗಳು ಹಾಗೂ 9ರಿಂದ 12ನೆ ತರಗತಿಗೆ 4 ಕಲೋತ್ಸವ ಸ್ಪರ್ಧೆಗಳು ನಡೆಯಲಿದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ 1,020 ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 488 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇಲಾಖೆಯ ಆದೇಶದಂತೆ ಗೆಲುವು ಪಡೆದ ನಗದು ಬದಲಾಗಿ ವಿದ್ಯಾರ್ಥಿಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪುಸ್ತಕಗಳನ್ನು ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯ ಸಂಚಾಲಕ ರೊನಾಲ್ಡ್ ಪಿಂಟೊ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸುಂದರ ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್, ಶಿಕ್ಷಣ ಸಂಯೋಜಕಿ ತನುಜಾ ಮತ್ತು ಮುಖ್ಯ ಶಿಕ್ಷಕಿ ಗ್ರೇಸಿ ಮಿರಾಂದ ಉಪಸ್ಥಿತರಿದ್ದರು.





