ಗೋರಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಧರಣಿ
ಕೆಂಜೂರು ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ

ಮಂಗಳೂರು, ಆ.18: ಉಡುಪಿಯಲ್ಲಿ ನಡೆದ ಪ್ರವೀಣ್ ಪೂಜಾರಿ ಹತ್ಯೆ ಖಂಡಿಸಿ, ಕೊಲೆಗಡುಕ ಗೋರಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಡಿವೈಎಫ್‌ಐ, ದಲಿತ ಸಂಘರ್ಷ ಸಮಿತಿ, ಎಸ್‌ಎಫ್‌ಐ ವಿಚಾರವಾದಿ ವೇದಿಕೆ ಮತ್ತಿತರ ಸಮಾನಮನಸ್ಕ ಸಂಘಟನೆಗಳಿಂದ ಧರಣಿ ನಡೆಯಿತು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಂಘಪರಿವಾರದ ಸಂಘಟನೆಗಳು ಕಾಣೆಯಾಗಿವೆ. ಸಂಘ ಪರಿವಾರದ ಕಾರ್ಯಕರ್ತನನ್ನೇ ಹತ್ಯೆಗೈದ ಘಟನೆಯನ್ನು ವಿರೋಧಿಸದ ಸಂಘಪರಿವಾರದ ಬಣ್ಣ ಬಯಲಾಗಿದೆ. ಈ ಹತ್ಯೆಗಿಂತ ದೊಡ್ಡ ದೇಶದ್ರೋಹವಿಲ್ಲ ಎಂದು ಹೇಳಿದರು.
ಸಂಘಪರಿವಾರದ ಕಾರ್ಯಕರ್ತರ ಪೌರುಷ ದೇಶದ ದೊಡ್ಡ ದುರಂತವಾಗಿದೆ. ಸಂಘ ಪರಿವಾರದಿಂದ ಹಿಂದುಳಿದ ಯುವಕರು ಬಲಿಯಾಗುತ್ತಿದ್ದು, ಸಂಚಿಗೆ ಬಲಿಯಾಗಿ ಜೈಲು ಸೇರಿದ್ದಾರೆ. ಧರ್ಮರಕ್ಷಣೆಗಾಗಿ ಯುದ್ಧ ಮಾಡಲು ಹೋದವರು ಜೈಲಿನಲ್ಲಿ ಇದ್ದಾರೆ. ಮೃತ ಪ್ರವೀಣ್ ಪೂಜಾರಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು. ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಬಾರದು. ನಕಲಿ ಗೋರಕ್ಷಕರ ಮೇಲೆ ಗೂಂಡಾ ಕಾಯ್ದೆ ಜೊತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುನೀರ್ ಆಗ್ರಹಿಸಿದರು.
ಬಿಜೆಪಿ ಮುಖಂಡ ಈಶ್ವರಪ್ಪ ಆರಂಭಿಸಲಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಮೊದಲ ಕೆಲಸ ಪ್ರವೀಣ್ ಪೂಜಾರಿ ಕುಟುಂಬಕ್ಕೆ ನ್ಯಾಯ ಒದಗಿಸುವುದು ಎಂದು ಹೇಳಿದರು.
ಧರಣಿಯಲ್ಲಿ ಡಿವೈಎಫ್‌ಐ ಮುಖಂಡರಾದ ಸಂತೋಷ್ ಬಜಾಲ್, ದಯನಂದ ಶೆಟ್ಟಿ, ಇಮ್ತಿಯಾಝ್ ಬಿ.ಕೆ., ಎಸ್ಎಫ್ಐ ಮುಖಂಡರಾದ ನಿತಿನ್ ಕುತ್ತಾರ್, ಚರಣ್ ಶೆಟ್ಟಿ, ದಲಿತ ಮುಖಂಡರಾದ ರಘು ಎಕ್ಕಾರ್, ಲಕ್ಷ್ಮಣ ಕಾಂಚನ್, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ ಮೊದಲಾದವರು ನೇತೃತ್ವ ವಹಿಸಿದ್ದರು.







