ಕಾರ್ಮಿಕರ ಮುಷ್ಕರಕ್ಕೆ ಪೂರ್ವಭಾವಿಯಾಗಿ ಸುಳ್ಯದಲ್ಲಿ ಜಾಥಾ
.jpg)
ಸುಳ್ಯ, ಆ.18: ಕಾರ್ಮಿಕ ವರ್ಗದ ಪ್ರಮುಖ 17 ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿವಿಧ ಕಾರ್ಮಿಕ ಸಂಘಟನೆಗಳು ಸೆ.2ರಂದು ಅಖಿಲ ಭಾರತ ಸಾರ್ವತ್ರಿಕ ಮಹಾ ಮುಷ್ಕರವನ್ನು ಹಮ್ಮಿಕೊಂಡಿದ್ದು, ಇದರ ಪ್ರಚಾರಾರ್ಥವಾಗಿ ನಡೆಸುತ್ತಿರುವ ಜಾಥಾ ಸುಳ್ಯಕ್ಕೆ ಆಗಮಿಸಿತು. ಸುಳ್ಯ ಬಸ್ ನಿಲ್ದಾಣದ ಬಳಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕೇಂದ್ರ ಸರಕಾರದ ಆರ್ಥಿಕ ನೀತಿಗಳು ದೇಶದ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳನ್ನು ಹೆಚ್ಚಿಸಿವೆ. ದೊಡ್ಡ ಬಂಡವಾಳಗಾರರ ಹಿತಾಸಕ್ತಿಗೆ ಅನುಗುಣವಾಗಿ ಆರ್ಥಿಕ ನೀತಿ, ಕೈಗಾರಿಕಾ ನೀತಿಗಳನ್ನು ಜಾರಿಗೊಳಿಸುತ್ತಿದೆ. ಅವರಿಗಾಗಿ ದೇಶದ ಕಾರ್ಮಿಕ ವರ್ಗ ಹೋರಾಟ ಮಾಡಿ ಪಡೆದ ಕಾರ್ಮಿಕ ಕಾನೂನುಗಳನ್ನು ಸುಧಾರಣೆಯ ಹೆಸರಿನಲ್ಲಿ ಪರಿವರ್ತಿಸಲು ಹೊರಟಿದೆ. ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುತ್ತಿದೆ ಎಂದು ಹೇಳಿದರು.
ಸಬೆಯಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ಕೆ.ಪಿ. ಜಾನಿ, ಮುಖಂಡರಾದ ವಸಂತ ಆಚಾರಿ, ಕರುಣಾಕರ್, ರಾಜೇಶ್ ಕುಮಾರ್, ಮಂಜುನಾಥ್, ಮೊಯ್ದೀನ್, ಬಿಜು ಆಗಸ್ಟೀನ್, ಶಿವರಾಮ ಗೌಡ ಕೇರ್ಪಳ, ನಾಗರಾಜ್ ಮೇಸ್ತ್ರಿ ಬೆಟ್ಟಂಪಾಡಿ, ವಿಶ್ವನಾಥ್ ನೆಲ್ಲಿ ಬಂಗಾರಡ್ಕ ಮೊದಲಾದವರಿದ್ದರು. ರಾಬರ್ಟ್ ಡಿಸೋಜ ಸ್ವಾಗತಿಸಿ, ವಂದಿಸಿದರು.





