ಸಿರಿಯ ಯುದ್ಧದ ಕ್ರೌರ್ಯವನ್ನು ತೆರೆದಿಟ್ಟ ಬಾಲಕನ ಚಿತ್ರ

ಅಲೆಪ್ಪೊ (ಸಿರಿಯ), ಆ. 18: ಸಿರಿಯದ ಮುತ್ತಿಗೆಗೊಳಗಾದ ನಗರ ಅಲೆಪ್ಪೊದಲ್ಲಿ ನಡೆದ ವಾಯು ದಾಳಿಯಲ್ಲಿ ಗಾಯ ಹಾಗೂ ಆಘಾತಗೊಂಡ ಐದು ವರ್ಷದ ಬಾಲಕನೊಬ್ಬನ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ತಲ್ಲಣ ಸೃಷ್ಟಿಸಿವೆ.
ಅಲೆಪ್ಪೊ ನಗರದಲ್ಲಿ ನಡೆದ ವಾಯು ದಾಳಿಯೊಂದರಲ್ಲಿ ಗಾಯಗೊಂಡ ಬಾಲಕನ ಚಿತ್ರಗಳನ್ನು ಪ್ರತಿಪಕ್ಷ ಕಾರ್ಯಕರ್ತರು ಬುಧವಾರ ಬಿಡುಗಡೆ ಮಾಡಿದರು. ಈ ಚಿತ್ರವು ಐದು ವರ್ಷಗಳ ಸಿರಿಯ ನಾಗರಿಕ ಯುದ್ಧದಲ್ಲಿ ನಾಗರಿಕರ ಯಾತನೆಯನ್ನು ಜಗತ್ತಿಗೆ ತೆರೆದಿಟ್ಟಿದೆ. ಆಘಾತಗೊಂಡ ಹಾಗೂ ಬಳಲಿದಂತೆ ಕಂಡುಬಂದ ಬಾಲಕನು, ಬಾಂಬ್ ದಾಳಿಯ ಬಳಿಕ ಆ್ಯಂಬುಲೆನ್ಸ್‌ನಲ್ಲಿ ಏಕಾಂಗಿಯಾಗಿ ಬೆದರಿ ಕುಳಿತಿರುವುದನ್ನು ತೋರಿಸುವ ವೀಡಿಯೊವನ್ನು ಅಲೆಪ್ಪೊ ಮೀಡಿಯ ಸೆಂಟರ್ ಇಂಟರ್‌ನೆಟ್‌ಗೆ ಹಾಕಿದೆ.
ಬಾಲಕನನ್ನು ಐದು ವರ್ಷದ ಉಮ್ರಾನ್ ದಾಖ್‌ನೀಶ್ ಎಂಬುದಾಗಿ ಸಿರಿಯನ್ ಸಿವಿಲ್ ಡಿಫೆನ್ಸ್‌ನ ಅಲೆಪ್ಪೊದಲ್ಲಿರುವ ಸದಸ್ಯ ಖಾಲಿದ್ ಖಾಲಿದ್ ಗುರುತಿಸಿದ್ದಾರೆ. ಬಾಲಕನನ್ನು ಬಳಿಕ ‘ವೈಟ್ ಹೆಲ್ಮೆಟ್ಸ್’ ಎನ್ನುವ ಗುಂಪಿನ ಸದಸ್ಯರು ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು.
ಬಾಲಕನ ತಲೆಗೆ ಸಣ್ಣಪುಟ್ಟ ಗಾಯಗಳಾಗಿವೆ ಹಾಗೂ ರಾತ್ರಿ ಆತನನ್ನು ಆಸ್ಪತ್ತೆಯಿಂದ ಬಿಡುಗಡೆ ಮಾಡಲಾಗಿದೆ. ಅದೇ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಹಾಗೂ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದಾರೆ.
ಉಮ್ರಾನ್‌ನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದವು. ಉಮ್ರಾನ್‌ನ ಪರಿಸ್ಥಿತಿಯ ಬಗ್ಗೆ ಸಿರಿಯನ್ನರು ಹಾಗೂ ವಿದೇಶೀಯರು ಸಾಮಾಜಿಕ ಜಾಲತಾಣಗಳಲ್ಲಿ ಆಘಾತ ಮತ್ತು ಅಸಹನೆ ವ್ಯಕ್ತಪಡಿಸಿದ್ದಾರೆ.







