ಬಿಜೆಪಿ ಅಧಿಕಾರಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ: ಈಶ್ವರಪ್ಪ

ಬೆಂಗಳೂರು, ಆ.18: ದಲಿತ ಹಾಗೂ ಹಿಂದುಳಿದ ಸಮುದಾಯಕ್ಕೆ ನ್ಯಾಯ ಒದಗಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರ ತರುವುದಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ಸ್ ಸ್ಥಾಪಿಸಲಾಗಿದೆ ಎಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ಹಾಗೂ ದಲಿತ ಸಮುದಾಯದ ಸಂಖ್ಯೆ ಹೆಚ್ಚಿದ್ದು, ಇವರನ್ನು ಬಿಜೆಪಿಯತ್ತ ಸೆಳೆಯುವ ನಿಟ್ಟಿನಲ್ಲಿ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಕೆಲಸ ಮಾಡಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸುವುದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲ ನಾಯಕರ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಹಿಂದುಳಿದ ಹಾಗೂ ದಲಿತರನ್ನು ಬಿಜೆಪಿಯತ್ತ ಸೆಳೆಯುವ ನಿಟ್ಟಿನಲ್ಲಿ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ನಮ್ಮ ನಿರ್ಧಾರಕ್ಕೆ ಬಿಜೆಪಿಯ ಎಲ್ಲ ಮುಖಂಡರು ಸಹಕರಿಸಲಿದ್ದಾರೆ ಎಂದು ಅವರು ಆಶಿಸಿದರು.
ಸಂಗೊಳ್ಳಿರಾಯಣ್ಣ ಬ್ರಿಗೇಡ್‌ನಲ್ಲಿ ನಾನು ನಿಮಿತ್ತ ಮಾತ್ರ. ಹಿಂದುಳಿದ ಹಾಗೂ ಸಮುದಾಯದ ಎಲ್ಲ ಮುಖಂಡರು ಸೇರಿ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಲು ಮುಂದಾಗಿದ್ದಾರೆ. ಆ ಮುಖಂಡರು ಇರು ಅನ್ನುವವರೆಗೂ ಇರುತ್ತೇನೆ. ಸಂಘಟನೆ ಬಿಟ್ಟು ಹೋಗು ಅಂದ್ರೆ ಆ ಕ್ಷಣವೆ ಬಿಟ್ಟು ಹೊರಡುತ್ತೇನೆ ಎಂದು ಅವರು ಹೇಳಿದರು.
ಅಹಿಂದ ಮುಖಂಡ ಮುಕಡಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ಹಾಗೂ ದಲಿತ ಸಮುದಾಯದ ಪರವಾಗಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಅವರನ್ನು ಬೆಂಬಲಿಸುವುದಕ್ಕಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರೆ ನಮ್ಮ ನಾಯಕರು. ಇದರಲ್ಲಿ ಯಾವುದೆ ಅನುಮಾನ ಬೇಡ. ಪ್ರಸ್ತುತ ಉಂಟಾಗಿರುವ ಎಲ್ಲ ಗೊಂದಲಗಳನ್ನು ಸಂಗೊಳ್ಳಿರಾಯಣ್ಣ ಬ್ರಿಗೇಡ್ ನಾಯಕ ಕೆ.ಎಸ್.ಈಶ್ವರಪ್ಪ ಬಗೆಹರಿಸಲಿದ್ದು, ಸಂಘಟನೆಯ ಉದ್ಘಾಟನೆಗೆ ಬಿ.ಎಸ್.ಯಡಿಯೂರಪ್ಪರನ್ನೆ ಕರೆತರಲಾಗುವುದು ಎಂದು ಅವರು ತಿಳಿಸಿದರು.
ದಲಿತ ಮುಖಂಡ ಚಿ.ನಾ.ರಾಮು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಕೆಲಸ ಮಾಡಲಿದೆ ಎಂದು ತಿಳಿಸಿದರು. ಈ ವೇಳೆ ಮಾಜಿ ಸಚಿವ ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.







