ಇಸ್ಲಾಮಿನ ಧನಾತ್ಮಕ ಅಂಶವನ್ನು ಜಗತ್ತಿಗೆ ತೋರಿಸಿದ 3 ಒಲಿಂಪಿಯನ್ನರು!

ಒಲಿಂಪಿಕ್ಸ್ ಕೂಟ ಆರಂಭವಾಗುವ ಮೊದಲು 2016ರ ರಿಯೋ ಒಲಿಂಪಿಕ್ಸಲ್ಲಿ ಇಸ್ಲಾಂ ಎನ್ನುವ ಪದವನ್ನು ಭಯೋತ್ಪಾದನೆ ಮತ್ತು ಭದ್ರತೆಯ ವಿಷಯದಲ್ಲಿ ತಳಕು ಹಾಕಿ ಉಲ್ಲೇಖಿಸಲಾಗುತ್ತಿತ್ತು. ಆದರೆ ಗೇಮ್ಸ್ ಈಗ ಕೊನೆಯಾಗುತ್ತಿರುವ ಸಂದರ್ಭದಲ್ಲಿ ಭಯೋತ್ಪಾದಕ ದಾಳಿಯ ಭಯ ಮಾಯವಾಗಿದೆ ಮತ್ತು ಅದರ ಸ್ಥಳದಲ್ಲಿ ಮುಸ್ಲಿಂ ಅಥ್ಲೀಟ್‌ಗಳ ಸಾಧನೆಯ ಮಾತು ಕೇಳಿಬರುತ್ತಿದೆ. ಮುಸ್ಲಿಂ ಸಾಧನೆಗಳು ಇಸ್ಲಾಂ ಕುರಿತ ರೂಢಿಗತ ನಂಬಿಕೆಗಳನ್ನು ದೂರ ಮಾಡಿವೆ.
ಮೋ ಫರ್ಹಾ, ಸಾರಾ ಅಹ್ಮದ್ ಮತ್ತು ಇಬ್ತಿಹಾಜ್ ಮುಹಮ್ಮದ್ ಒಲಿಂಪಿಕ್ ವೇದಿಕೆಯ ಸಂಶಯ, ಜನಾಂಗೀಯವಾದ ಮತ್ತು ಇಸ್ಲಾಮೋಫೋಬಿಯದ ನಡುವೆ ರಿಯೋದಲ್ಲಿ ಸಾಧನೆಗೈದು ಹಿರಿಮೆ ತಂದ ಮುಸ್ಲಿಂ ಅಥ್ಲೀಟ್‌ಗಳಾಗಿದ್ದಾರೆ.
ಪ್ರಾರ್ಥನೆಯ ಶಕ್ತಿ
ಆಗಸ್ಟ್ 13ರಂದು ಸೋಮಾಲಿ ಬ್ರಿಟಿಷ್ ದೂರ ಓಟಗಾರರಾಗಿರುವ ಮೋ ಫರ್ಹಾ ಅವರು 10,000 ಮೀಟರ್ ಓಟದಲ್ಲಿ ಹಿಂದೆ ಹಿಂದೆ ಸ್ವರ್ಣ ಪದಕಗಳನ್ನು ಪಡೆದಿದ್ದಾರೆ. ಓಟದ ನಡುವೆ ಗೆಲುವಿನ ಫೇವರಿಟ್ ಆಗಿದ್ದ ಫರ್ಹಾ ಮತ್ತೊಬ್ಬ ಓಟಗಾರನ ಕಾಲು ತಾಗಿ ಟ್ರ್ಯಾಕ್ ಮೇಲೆ ಬಿದ್ದರು. ಆದರೂ ಧೃತಿಗೆಡದೆ ಎದ್ದು ಓಡಿದ ಅವರು ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗೆದ್ದರು. ಗೆಲುವಿನ ಗೆರೆ ದಾಟಿದ ಕೂಡಲೇ ಅವರು ಮತ್ತೊಮ್ಮೆ ಟ್ರ್ಯಾಕ್ ಮೇಲೆ ಬಿದ್ದರು. ಈ ಬಾರಿ ಅವರು ಪ್ರಾರ್ಥನೆಗಾಗಿ ಬಾಗಿದ್ದರು. ತಮ್ಮ ತಲೆಯನ್ನು ಸ್ಟೇಡಿಯಂ ಕಡೆಗೆ ಬಾಗಿಸಿ ನಾಟಕೀಯವಾಗಿ ಪ್ರೇಕ್ಷಕರ ಅಭಿಮಾನವನ್ನು ಸ್ವೀಕರಿಸಿದರು. ಫರ್ಹಾ ಅವರ ಪ್ರಾರ್ಥನೆಯು ಮುಸ್ಲಿಂ ಜನಾಂಗದ ಬಗ್ಗೆ ಜಾಗತಿಕವಾಗಿ ಇರುವ ರೂಢಿಗತ ಕೆಟ್ಟ ನಂಬಿಕೆಯನ್ನು ದೂರಮಾಡಲು ನೆರವಾಗಲಿದೆ. ಫರ್ಹಾರಿಗೆ ಮತ್ತು ಅಸಂಖ್ಯಾತ ಮುಸ್ಲಿಂ ಅಥ್ಲೀಟ್‌ಗಳಿಗೆ ನಂಬಿಕೆ ಆಕಸ್ಮಿಕವಲ್ಲ. ಬದಲಾಗಿ ತಮ್ಮ ಕ್ರೀಡಾ ಪ್ರದರ್ಶನದ ಕೇಂದ್ರ ಬಿಂದು. ನಾನು ಸಾಮಾನ್ಯವಾಗಿ ಓಟಕ್ಕೆ ಮೊದಲು ಪ್ರಾರ್ಥಿಸುತ್ತೇನೆ. ದುವಾ (ಇಸ್ಲಾಮಿಕ್ ಪ್ರಾರ್ಥನೆ) ಓದಿ ನಾನೆಷ್ಟು ಕಠಿಣ ಪರಿಶ್ರಮ ಪಟ್ಟಿದ್ದೇನೆ ಎಂದು ನೆನಪಿಸಿಕೊಂಡು ಓಟಕ್ಕೆ ಸಿದ್ಧನಾಗುತ್ತೇನೆ ಎನ್ನುತ್ತಾರೆ ಫರ್ಹಾ.
ಲಿಂಗದ ಬಗ್ಗೆ ರೂಢಮಾದರಿಯ ಭಾರ
ತಲೆಗೆ ಸ್ಕಾರ್ಫ್ ಕಟ್ಟಿಕೊಂಡ ಯುವತಿಯ ದುರ್ಬಲ ಮತ್ತು ಸ್ವಾವಲಂಬನೆಯಿಲ್ಲದ ವ್ಯಕ್ತಿಯಾಗಿ ಕಾಣಬಹುದು. ಆದರೆ ಈಜಿಪ್ತಿನ ವೈಟ್‌ಲಿಫ್ಟರ್ ಸಾರಾ ಅಹ್ಮದ್ ಹಾಗಿಲ್ಲ. ಅವರು ಜಗತ್ತಿನ ಬಹುತೇಕ ಮಹಿಳೆಯರ ದೈಹಿಕ ಶಕ್ತಿಯನ್ನು ಮೀರಿಸುವಂತಹ ಸಮರ್ಥರು.
ಕರಿಬಟ್ಟೆ ತೊಟ್ಟು ತಲೆಗೆ ದೇಶದ ಬಣ್ಣವಾದ ಕೆಂಪು ಸ್ಕಾರ್ಫ್ ತೊಟ್ಟ ಸಾರಾ 69 ಕೇಜಿ ಭಾರದ ವಿಭಾಗದಲ್ಲಿ ಒಟ್ಟು 255 ಕೆಜಿ ತೂಕವನ್ನು ಎತ್ತಿ ಕಂಚಿನ ಪದಕ ಪಡೆದಿದ್ದಾರೆ. ಈ ಸಾಧನೆ ಆಕೆಯ ರಾಷ್ಟ್ರ ಮತ್ತು ಜನಾಂಗದ ಮಟ್ಟಿಗೆ ಅಭೂತಪೂರ್ವ. ಅಹ್ಮದ್ ಕಂಚಿನ ಪದಕ ಗೆದ್ದ ಕೂಡಲೇ ತವರು ದೇಶ ಈಜಿಪ್ತಿನಲ್ಲಿ ಮನೆಮಾತಾದರು. ದೇಶದ 104 ವರ್ಷದ ಇತಿಹಾಸದಲ್ಲಿ ಈ ಸಾಧನೆಗೈದ ಮೊದಲ ಮಹಿಳೆಯಾದರು. ಅಲ್ಲದೆ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ಪಡೆದ ಮೊದಲ ಅರಬ್ ಮಹಿಳೆಯೂ ಆಗಿದ್ದಾರೆ.
ಪದಕ ಪಡೆಯಲು ತನ್ನ ತಲೆ ಭಾಗಿಸಿದಾಗ ಅಹ್ಮದ್ ಮುಸ್ಲಿಂ ಮಹಿಳೆಯರ ಶಕ್ತಿ ಮತ್ತು ಪ್ರಾಬಲ್ಯಕ್ಕೆ ಸಾಕ್ಷಿಯಾದರು. ಫ್ರಾನ್ಸ್‌ನಲ್ಲಿ ತಲೆಯ ಸ್ಕಾರ್ಫ್ ನಿಷೇಧ ಹೇರಿದವರು ಮತ್ತು ಅಮೆರಿಕ ಮತ್ತು ಇತರ ಕಡೆಗೆ ಶೋಷಣೆಗೆ ಒಳಗಾದವರು ಎನ್ನುವ ಭಾವನೆಯನ್ನು ಮೀರಿ ಕಂಡರು.
ಇಸ್ಲಾಮೋಫೋಬಿಯ ಮತ್ತು ಜನಾಂಗೀಯವಾದಕ್ಕೆ ತಡೆ
ಇಬ್ತಿಹಾಜ್ ಮುಹಮ್ಮದ್ ಜಾಗತಿಕ ವಲಯಕ್ಕೆ ಬರುವ ಮೊದಲೇ ಮುಸ್ಲಿಂ ಅಮೆರಿಕನ್ ಸಮುದಾಯದ ತಾರೆಯಾಗಿದ್ದಾರೆ. ಆದರೆ ಆಕೆಯ ಕತೆ ಕೇವಲ ಸ್ಪರ್ಧೆಯಲ್ಲಿ ಹಿಜಾಬ್ ಧರಿಸಿದ ಮೊದಲ ಅಮೆರಿಕನ್ ಒಲಿಂಪಿಯನ್ ಎಂದಷ್ಟೇ ಉಳಿದಿಲ್ಲ. ಬಹಳ ಕಾಲದಿಂದ ಮುಸ್ಲಿಮೇತರರಿಂದ ಮತ್ತು ಮುಸ್ಲಿಮರಿಂದ ಅಲಕ್ಷ್ಯಕ್ಕೆ ಒಳಗಾಗಿದ್ದ ಉದ್ದೇಶವೊಂದನ್ನು ಮುನ್ನೆಲೆಗೆ ತಂದಿದ್ದಾರೆ: ಆಫ್ರಿಕನ್ ಅಮೆರಿಕನ್ ಮುಸ್ಲಿಮರ ವಿಶಿಷ್ಟ ಅನುಭವ ಮತ್ತು ಜನಾಂಗೀಯವಾದ ಹಾಗೂ ಇಸ್ಲಾಮೋಫೋಬಿಯದಿಂದ ಸೃಷ್ಟಿಯಾದ ವಿಶಿಷ್ಟ ಸಮಸ್ಯೆಗಳು.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಮುಸ್ಲಿಂ ಅತಿಕ್ರಮಣಕಾರರನ್ನು ನಿಷೇಧಿಸಬೇಕು ಎನ್ನುವ ಪ್ರಸ್ತಾಪ ಇಟ್ಟಿರುವುದಕ್ಕೆ ಪ್ರತಿಕ್ರಿಯಿಸಿದ ಇಬ್ತಿಹಾಜ್ ಮುಹಮ್ಮದ್, ನಾನು ಆಫ್ರಿಕನ್ ಅಮೆರಿಕನ್. ನನಗೆ ಹೋಗಲು ಬೇರೆ ಮನೆಯಿಲ್ಲ. ನನ್ನ ಕುಟುಂಬವೇ ಇಲ್ಲಿ ಜನಿಸಿದೆ. "ನಾನು ಇಲ್ಲೇ ಜನಿಸಿದ್ದೇನೆ. ನಾನು ನ್ಯೂಜೆರ್ಸಿಯಲ್ಲೇ ಬೆಳೆದವಳು. ನನ್ನ ಕುಟುಂಬದವರೂ ನ್ಯೂಜೆರ್ಸಿಯಲ್ಲಿದ್ದಾರೆ. ನಾವೆಲ್ಲರೂ ಎಲ್ಲಿ ಹೋಗಬೇಕು?" ಎಂದು ಪ್ರಶ್ನಿಸಿದ್ದಾರೆ. ಆಕೆ ಕಂಚಿನ ಪದಕ ಪಡೆದರೇನಾಯಿತು, ತಮ್ಮ ಕತೆ ಮತ್ತು ಅಲಕ್ಷ್ಯಕ್ಕೊಳಗಾದ ವಿಚಾರಗಳನ್ನು ಒಲಿಂಪಿಕ್ ಸಾಧನೆಯ ಸುವರ್ಣಾಕ್ಷರದಲ್ಲಿ ಬರೆದಿದ್ದಾರೆ.
(ಬೇಡೌನ್ ಅವರು ಡೆಟ್ರಾಯ್ಟಾ ವಿಶ್ವವಿದ್ಯಾಲಯದ ಯುಸಿ-ಬರ್ಕಲಿ ಇಸ್ಲಾಮಾಫೋಬಿಯ ರೀಸರ್ಚ್ ಆಂಡ್ ಡಾಕ್ಯುಮೆಂಟರಿ ಪ್ರಾಜೆಕ್ಟ್‌ನ ಅಸೋಸಿಯೇಟ್ ಕಾನೂನು ಪ್ರೊಫೆಸರ್)
ಕೃಪೆ: time.com







