ರಿಯೋ ಒಲಿಂಪಿಕ್ಸ್: ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಸಿಂಧು ಫೈನಲ್‌ಗೆ

ರಿಯೊ ಡಿ ಜನೈರೊ, ಆ.18: ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಪದಕ ಗೆಲ್ಲುವ ಕನಸು ಹೊತ್ತಿರುವ ಭಾರತದ ಪಿ. ವಿ ಸಿಂಧು ಫೈನಲ್ ಪ್ರವೇಶಿಸುವ ಮೂಲಕ ಒಲಿಂಪಿಕ್ಸ್ ನಲ್ಲಿ ಚಿನ್ನ ಅಥವಾ ಬೆಳ್ಳಿ ಪದಕ ದೃಢಪಡಿಸಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚು ಜಯಿಸಿರುವ ಸಿಂಧು ಇಂದು ನಡೆದ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಜಪಾನ್‌ನ ನೊಜೊಮಿ ಒಕುಹರ ವಿರುದ್ಧ 21-19, 21-10 ಅಂತರದಲ್ಲಿ ಭರ್ಜರಿ ಜಯ ಗಳಿಸಿ ಫೈನಲ್ ತಲುಪಿದರು.
ತನ್ನ ಚೊಚ್ಚಲ ಒಲಿಂಪಿಕ್ಸ್ ನಲ್ಲಿ ಫೈನಲ್ ತಲುಪಿರುವ ಸಿಂಧು ಹೊಸ ಇತಿಹಾಸ ಬರೆದಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ್ತಿ ಸ್ಪೇನ್‌ನ ಕರೋಲಿನಾ ಮರೀನ್ ಅವರನ್ನು ಎದುರಿಸಲಿದ್ದಾರೆ.
ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು 22–20, 21–19ರ ನೇರ ಗೇಮ್‌ಗಳಿಂದ ಚೀನಾದ ವಾಂಗ್ ಯಿಹಾನ್‌ಗೆ ಆಘಾತ ನೀಡಿ ಸೆಮಿ ಫೈನಲ್ ತಲುಪಿದ್ದರು.





