ಬಲೂಚಿಸ್ತಾನ ವಿಷಯದಲ್ಲಿ ಮೋದಿ ಲಕ್ಷ್ಮಣರೇಖೆ ದಾಟಿದ್ದಾರೆ: ಪಾಕ್

ಇಸ್ಲಾಮಾಬಾದ್, ಆ. 18: ಬಲೂಚಿಸ್ತಾನದ ಬಗ್ಗೆ ಮಾತನಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಲಕ್ಷ್ಮಣರೇಖೆಯನ್ನು ದಾಟಿದ್ದಾರೆ ಎಂದು ಪಾಕಿಸ್ತಾನ ಇಂದು ಹೇಳಿದೆ ಹಾಗೂ ಮುಂದಿನ ತಿಂಗಳು ನಡೆಯಲಿರುವ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕಾಶ್ಮೀರ ವಿವಾದವನ್ನು ಮತ್ತಷ್ಟು ‘‘ಪ್ರಬಲವಾಗಿ’’ ಪ್ರಸ್ತಾಪಿಸುವುದಾಗಿ ತಿಳಿಸಿದೆ.
‘‘ಕಳೆದ ವರ್ಷದ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪ್ರಧಾನಿ ಕಾಶ್ಮೀರ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿದ್ದರು. ಈ ಬಾರಿ ನಾವು ಮತ್ತಷ್ಟು ಪ್ರಬಲವಾಗಿ ವಿಷಯವನ್ನು ಪ್ರಸ್ತಾಪಿಸುತ್ತೇವೆ’’ ಎಂದು ಪಾಕಿಸ್ತಾನ ವಿದೇಶ ಕಚೇರಿಯ ವಕ್ತಾರ ನಫೀಸ್ ಝಕಾರಿಯ ಹೇಳಿದರು.
ಇಲ್ಲಿ ತನ್ನ ವಾರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಝಕಾರಿಯ, ಬಲೂಚಿಸ್ತಾನದ ಬಗ್ಗೆ ಮೋದಿ ಆಡಿದ ಮಾತುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಸೋಮವಾರ ತನ್ನ ಸ್ವಾತಂತ್ರ ದಿನದ ಭಾಷಣದಲ್ಲಿ ಬಲೂಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿ ಪಾಕಿಸ್ತಾನ ನಡೆಸುತ್ತಿದೆಯೆನ್ನಲಾದದ ದೌರ್ಜನ್ಯಗಳ ಬಗ್ಗೆ ಪ್ರಸ್ತಾಪಿಸಿರುವುದನ್ನು ಸ್ಮರಿಸಬಹುದಾಗಿದೆ.
‘‘ಇದು ವಿಶ್ವಸಂಸ್ಥೆಯ ಸನ್ನದಿನ ಉಲ್ಲಂಘನೆಯಾಗಿದೆ. ಅವರು (ಮೋದಿ) ಬಲೂಚಿಸ್ತಾನದ ಬಗ್ಗೆ ಮಾತನಾಡುವ ಮೂಲಕ ಲಕ್ಷ್ಮಣರೇಖೆಯನ್ನು ದಾಟಿದ್ದಾರೆ’’ ಎಂದು ಝಕಾರಿಯ ಅಭಿಪ್ರಾಯಪಟ್ಟರು.
ಭಾರತ ಬಲೂಚಿಸ್ತಾನ ಮತ್ತು ಕರಾಚಿಗಳಲ್ಲಿ ಬುಡಮೇಲು ಕೃತ್ಯಗಳಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು. ಕಾಶ್ಮೀರದಲ್ಲಿ ತಾನು ನಡೆಸುತ್ತಿರುವ ಮಾನವಹಕ್ಕು ಉಲ್ಲಂಘನೆಗಳನ್ನು ಮರೆಮಾಚುವುದಕ್ಕಾಗಿ ಭಾರತ ಬಲೂಚಿಸ್ತಾನದ ಬಗ್ಗೆ ಮಾತನಾಡುತ್ತಿದೆ ಎಂದರು.







