ಪ್ರವೀಣ್ ಪೂಜಾರಿ ಕಗ್ಗೊಲೆಗೆ ಪ್ರಚೋದನೆಯಾದ ಹಿಂದೂ ಸಮಾಜೋತ್ಸವ: ಸ್ಥಳೀಯರ ಕಿಡಿ

ಬ್ರಹ್ಮಾವರ, ಆ.18: ಕೊಕ್ಕರ್ಣೆ ಪರಿಸರದಲ್ಲಿ ಈವರೆಗೆ ಯಾವುದೇ ಸಂಘ ಪರಿವಾರದ ಸಂಘಟನೆಗಳು ಇರಲಿಲ್ಲ. ಆ.2ರಂದು ನಡೆದ ಹಿಂದೂ ಸಮಾಜೋತ್ಸವದ ಬಳಿಕ ಇಲ್ಲಿ ಹುಟ್ಟಿಕೊಂಡ ಹಿಂದೂ ಜಾಗರಣಾ ವೇದಿಕೆ ಯಿಂದ ಪ್ರಚೋದಿತ ಯುವಕರ ತಂಡ ಈ ಕೃತ್ಯ ಎಸಗಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಈಗಾಗಲೇ ಬಂಧಿತನಾಗಿರುವ ಅರವಿಂದ ಕೋಟೇಶ್ವರ ಸಂತೆಕಟ್ಟೆಯಲ್ಲಿ ಪೆಟ್ರೋಲ್ ಬಂಕ್‌ನ್ನು ಲೀಸ್‌ಗೆ ತೆಗೆದುಕೊಂಡ ಬಳಿಕ ಇಲ್ಲಿ ಹಿಂದೂ ಜಾಗರಣಾ ವೇದಿಕೆಯನ್ನು ಸಂಘಟಿಸಿದ್ದನು. ಇದಕ್ಕಾಗಿ ಕೊಕ್ಕರ್ಣೆಯಲ್ಲಿ ಹಿಂದೂ ಸಮಾಜೋತ್ಸವ ನಡೆಸಿದ್ದನು. ಇದರಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಲಾಗಿತ್ತು ಎಂದು ಸ್ಥಳೀಯರಾದ ಡಾ.ಸಂಜೀವ ಶೆಟ್ಟಿ ಆರೋಪಿಸಿದ್ದಾರೆ.
ಕೊಕ್ಕರ್ಣೆ, ಸಂತೆಕಟ್ಟೆ ಪರಿಸರದಲ್ಲಿ ಹಿಂದೂ ಧರ್ಮದವರು ಬಿಟ್ಟರೆ ಬೇರೆ ಯಾವುದೇ ಸಮುದಾಯದವರಿಲ್ಲ. ಆದರೂ ದುರುದ್ದೇಶ ಇಟ್ಟುಕೊಂಡು ಸಂಘಟನೆ ಮಾಡಲಾಗಿದೆ. ಇದೀಗ ಇದರಿಂದ ಇಲ್ಲಿನ ಯುವಕರು ಮಕ್ಕಳು ದಾರಿ ತಪ್ಪಿದ್ದಾರೆ. ಲಾರಿ ವ್ಯಾನ್‌ಗಳನ್ನು ನಿಲ್ಲಿಸಿ ಲೂಟಿ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಇದರಿಂದ ಈಗ ನಮ್ಮ ಗ್ರಾಮ ವಿನಾಶದತ್ತ ಹೋಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರಕರಣ ನಡೆದ ಕೂಡಲೇ ದುಷ್ಕರ್ಮಿಗಳು ಪ್ರಕರಣ ಮುಚ್ಚಿ ಹಾಕುವಂತೆ ಹಲ್ಲೆಗೊಳಗಾದ ಅಕ್ಷಯ್ ಗೆ ಬೆದರಿಕೆಯೊಡ್ಡಿರುವ ಬಗ್ಗೆ ತಿಳಿದುಬಂದಿದೆ.
ಪ್ರವೀಣ್ ಪೂಜಾರಿ ಮೃತಪಟ್ಟ ವಿಷಯವನ್ನು ತಿಳಿದ ಆರೋಪಿಗಳು ನಿನ್ನೆ ರಾತ್ರಿ ಸಾಕ್ಷಿಗಳಿಗೆ ಬೆದರಿಕೆಯೊಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ರಮೇಶ್ ಪೂಜಾರಿ ಅವರನ್ನು ಸ್ಥಳೀಯ ಪ್ರಮುಖರು ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದಾರೆ. ಅದೇ ರೀತಿ ಅಕ್ಷಯ್ ಅಪಘಾತದಿಂದ ಗಾಯಗೊಂಡಿರುವುದಾಗಿ ಪೊಲೀಸರಿಗೆ ದೂರು ನೀಡುವಂತೆ ನಿನ್ನೆ ರಾತ್ರಿ ಬೆದರಿಕೆ ಹಾಕಲಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿರುವ ಅಕ್ಷಯ್‌ಗೆ ನಿರಂತರ ಬೆದರಿಕೆ ಕರೆ ಬರುತ್ತಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.







