ಮೋದಿ ಭಾಷಣ ಹಾಸ್ಯಾಸ್ಪದವಾಗುತ್ತಿದೆಯೇ

ಸ್ವಾತಂತ್ರ್ಯದಿನದಂದು ಕೆಂಪುಕೋಟೆಯ ವೇದಿಕೆ ಮೇಲೆ ನಿಂತು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿದ ಭಾಷಣ ಬಸವಳಿದ ಮತ್ತು ದಣಿದಂತಿತ್ತು. ಇದರಲ್ಲಿ ಅದೆಷ್ಟೋ ಬಾರಿ ಅವರು ಪುನರಾವರ್ತಿಸಿರುವ ಕೇವಲ ಘೋಷಣೆಗಳಿಗಷ್ಟೇ ಸೀಮಿತವಾಗಿ ಅದರಿಂದ ಮುಂದೆ ಸಾಗಲಾಗದ ಅವರ ಹಲವು ಪ್ರಿಯ ಅಭಿವೃದ್ಧಿ ಯೋಜನೆಗಳ ಬಗ್ಗೆಯೇ ಮತ್ತೆ ಉಲ್ಲೇಖಿಸಲಾಗಿತ್ತು. ಆದರೆ ಉದ್ಯೋಗ ಮತ್ತು ಗ್ರಾಮೀಣ ಆದಾಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಣುವಲ್ಲಿ ವಿಫಲವಾಗಿರುವಾಗ ಇಂಥಾ ಕಿರಿಕಿರಿ ಉಂಟು ಮಾಡುವ ಪುನರಾವರ್ತನೆಗಳನ್ನು ವಾಡದೆ ಬೇರೆ ಉಪಾಯವಿಲ್ಲ.
ಉದ್ಯೋಗಾಭಿವೃದ್ಧಿ ಮತ್ತು ಗ್ರಾಮೀಣ ಆದಾಯಕ್ಕೆ ಸಂಬಂಧಪಟ್ಟಂತೆ ಚಿತ್ರಣವು ಅಷ್ಟೊಂದು ತೃಪ್ತಿದಾಯಕವಾಗಿಲ್ಲ ಎಂಬುದು ಖುದ್ದು ಮೋದಿಗೂ ಗೊತ್ತು. 2015ರಲ್ಲಿ ಗ್ರಾಮೀಣ ವೇತನಾಭಿವೃದ್ಧಿ ಶೂನ್ಯವಾಗಿದ್ದರೆ ಸಂಘಟಿತ ಕ್ಷೇತ್ರದ ಉದ್ಯೋಗ ಬೆಳವಣಿಗೆ ದರ ಶೇ. 60 ಕುಸಿದಿದೆ. ಇತ್ತೀಚೆಗೆ ಅವರು ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಕೇಳಲಾದ ಪ್ರಶ್ನೆಗೆ, ಅಸಂಘಟಿತ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಹೇಳುತ್ತಾ ಮುದ್ರಾ ಬ್ಯಾಂಕ್‌ನಲ್ಲಿ ಸ್ವಉದ್ಯೋಗಪತಿಗಳು ಪಡೆದಿರುವ ಸಾಲದ ಖಾತೆಗಳ ಸಂಖ್ಯೆಗಳನ್ನು ಅದಕ್ಕೆ ಸಾಕ್ಷಿಯೆಂಬಂತೆ ತೋರಿಸಿದ್ದರು. ಆದರೆ ಮುದ್ರಾ ಬ್ಯಾಂಕ್ ನೀಡಿರುವ ಸಣ್ಣ ಸಾಲಗಳ ಖಾತೆಗೆ ಈಗಾಗಲೇ ಅಸ್ತಿತ್ವದಲ್ಲಿರುವ ಎಸ್‌ಬಿಐ, ಸಿಡ್ಬಿ, ನಬಾರ್ಡ್ ಮುಂತಾದ ಆರ್ಥಿಕ ಸಂಸ್ಥೆಗಳಲ್ಲಿ ಈಗಾಗಲೇ ಇರುವ ಸಾಲದ ಖಾತೆಗಳನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಮೋದಿ ನಿರ್ಲಕ್ಷಿಸಿದಂತಿದೆ.
ಆದರೂ ಭಾರತದ 70ನೆ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನ ಮಂತ್ರಿ ಎಲ್ಲಾ ಹಿಂದಿನ ಘೋಷಣೆಗಳನ್ನು ಹಿಂದಿಕ್ಕುವಂತೆ ಒಂದು ಘೋಷಣೆಯನ್ನು ಚಲಾವಣೆಗೆ ಬಿಟ್ಟರು. ‘ರಿಫಾರ್ಮ್, ಪರ್ಫಾರ್ಮ್ ಆ್ಯಂಡ್ ಟ್ರಾನ್ಸ್‌ಫಾರ್ಮ್’ (ಸುಧಾರಣೆ, ನಿರ್ವಹಣೆ ಮತ್ತು ಪರಿವರ್ತನೆ). ನಂತರ ಅವರು ತಮ್ಮ ಸರಕಾರ ವಿವಿಧ ಕ್ಷೇತ್ರಗಳಲ್ಲಿ ತೋರಿರುವ ನಿರ್ವಹಣೆ ಬಗ್ಗೆ ವಿವರಿಸಲು ಶುರುವಿಟ್ಟರು. ತಮ್ಮ ಸಾಧನೆಯನ್ನು ಪಟ್ಟಿ ಮಾಡುವಲ್ಲಿ ಅವರೆಷ್ಟು ಕಾತರರಾಗಿದ್ದರೆಂದರೆ ಏರ್ ಇಂಡಿಯಾ ಕಾರ್ಯಾಚರಿಸಬಲ್ಲ ಮಟ್ಟಿಗೆ ಲಾಭ ಮಾಡುತ್ತಿದೆ ಮತ್ತು ಬಿಎಸ್ಸೆನ್ನೆಲ್ ಲಾಭದತ್ತ ಮುಖಮಾಡಿದೆ ಎಂಬಂತಹ ಸಣ್ಣಾತಿಸಣ್ಣ ಅಂಶಗಳ ಬಗ್ಗೆಯೂ ಮಾತನಾಡಿದರು. ಸಾರ್ವಜನಿಕ ಕ್ಷೇತ್ರವು ಇದೇ ಮೊದಲ ಬಾರಿಗೆ ಸದೃಢಗೊಳ್ಳುತ್ತಿದೆ ಎಂಬುದಕ್ಕೆ ಇದು ಸೂಚನೆ ಎಂದು ಅವರು ಹೇಳಿದರು. ಆದರೆ ಈ ಬಗ್ಗೆ ಮಾಹಿತಿ ಹೊಂದಿರುವ ತಜ್ಞರ ಬಳಿ ಕೇಳಿ ನೋಡಿ, ಈ ಹಿಂದೆ ಅದೆಷ್ಟೋ ಬಾರಿ ಏರ್ ಇಂಡಿಯಾ ಕಾರ್ಯಗತ ಲಾಭದ ಮಟ್ಟಕ್ಕೆ ಏರಿ ನಂತರ ವಾಪಸ್ ನಷ್ಟದತ್ತ ಮುಖ ಮಾಡಿರುವ ಬಗ್ಗೆ ಅವರು ನಿಮಗೆ ವಿವರಿಸುತ್ತಾರೆ. ಏರ್ ಇಂಡಿಯಾದ ಕತೆಯನ್ನು ನೆನಪಿಸಲು ಅದು ಬಹಳಷ್ಟು ಪರಿಚಿತವಾಗಿದೆ. ಇನ್ನು ಬಿಎಸ್ಸೆನ್ನೆಲ್ ವಿಷಯಕ್ಕೆ ಬಂದರೆ ಒಂದು ಕಾಲದಲ್ಲಿ ಸಾರ್ವಜನಿಕ ಕ್ಷೇತ್ರದ ದೈತ್ಯ ಎಂದೆನಿಸಿಕೊಂಡಿದ್ದ ಈ ಸಂಸ್ಥೆ ದೀರ್ಘಕಾಲದ ನಿರ್ಲಕ್ಷ್ಯದ ಪರಿಣಾಮವಾಗಿ ತನ್ನ ಮಾರುಕಟ್ಟೆಯ ಸಿಂಹಪಾಲನ್ನು ಖಾಸಗಿ ಕ್ಷೇತ್ರಕ್ಕೆ ಬಿಟ್ಟುಕೊಟ್ಟಿದೆ. ರುಚಿರ್ ಶರ್ಮಾ ಬರೆದಿರುವ, 2008ರ ಜಾಗತಿಕ ಬಿಕ್ಕಟ್ಟಿನ ನಂತರದ ಬದಲಾವಣೆಯ ಶಕ್ತಿಗಳ ಬಗ್ಗೆ ಪ್ರಸ್ತಾಪಿಸುವ ‘ದ ರೈಸ್ ಆ್ಯಂಡ್ ಶೈನ್ ಆಫ್ ನೇಶನ್ಸ್’ ಪುಸ್ತಕದಲ್ಲಿ ಈ ಪ್ರಕ್ರಿಯೆಯನ್ನು ‘ಹಾನಿಕರ ನಿರ್ಲಕ್ಷ್ಯದ ಮೂಲಕ ಖಾಸಗೀಕರಣ’ ಎಂದು ಬಣ್ಣಿಸಿದ್ದಾರೆ. ಭಾರತದ ಸಾರ್ವಜನಿಕ ಬ್ಯಾಂಕ್‌ಗಳು ಕೂಡಾ ಇದೇ ರೀತಿಯ ಹಾನಿಕರ ನಿರ್ಲಕ್ಷ್ಯಕ್ಕೆ ಒಳಗಾಗುವುದರೊಂದಿಗೆ ಖಾಸಗೀಕರಣಗೊಳ್ಳುವ ಪ್ರಕ್ರಿಯೆಯ ಮೂಲಕ ಸಾಗುತ್ತಿದೆ.
ಮೋದಿ ಯಾವಾಗಲೂ ತಾನೊಬ್ಬ ಆಶಾವಾದಿ ಎಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದರು. ಹಲವು ಬಾರಿ ಅವರು ಸಾರ್ವಜನಿಕವಾಗಿ ತನ್ನ ಆಶಾವಾದಿ ಸ್ವಭಾವದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದೂ ಇದೆ. ಆದರೆ ಈ ಸ್ವಜಾಹೀರಾತಿನ ಸ್ವಭಾವವು ಮೂಲದಲ್ಲಿ ವಾಸ್ತವಾಂಶವನ್ನು ಕಾಣದಿರುವಷ್ಟು ತೀವ್ರವಾದ ಹಂತಕ್ಕೆ ತಲುಪಿದೆ. ಉದಾಹರಣೆಗೆ ಪ್ರಧಾನಿಯವರು ತಮ್ಮ ಸರಕಾರ ರೈತರಿಗಾಗಿ ಹಲವು ಕಾರ್ಯಗಳನ್ನು ಮಾಡಿದೆ ಎಂದು ಹೇಳಿದ್ದಾರೆ. ಇಂದು ರೈತ ದೇಶದಲ್ಲಿ ಎಲ್ಲಿ ಬೇಕಾದರೂ ತನ್ನ ಬೆಳೆಯನ್ನು ಮಾರಾಟ ಮಾಡಬಹುದು ಮತ್ತು ವಿದ್ಯುನ್ಮಾನ ವ್ಯಾಪಾರ ವೇದಿಕೆಯ ಮೂಲಕ ಉತ್ತಮ ಬೆಲೆಯನ್ನು ಪಡೆದುಕೊಳ್ಳಬಹುದು ಎಂದು ಮೋದಿ ಕೆಂಪುಕೋಟೆಯಲ್ಲಿ ನಿಂತು ಹೇಳಿದರು. ಇದು ನಿಜ ಅಲ್ಲವೇ ಅಲ್ಲ. ಪ್ರಖ್ಯಾತ ಕೃಷಿಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ ಪ್ರಕಾರ ರೈತರಿಗೆ ವಿದ್ಯುನ್ಮಾನ ವ್ಯಾಪಾರದ ಮೂಲಕ ತಡೆರಹಿತ ಕೃಷಿ ಮಾರುಕಟ್ಟೆಯನ್ನು ಅನುಷ್ಠಾನಕ್ಕೆ ತರಲು ಇನ್ನೂ ಹತ್ತು ವರ್ಷಗಳ ಕಾಲ ಕಾಯಬೇಕು. ಇನ್ನು ರೈತರ ಆದಾಯವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ದುಪ್ಪಟ್ಟು ಮಾಡುವ ಸಲುವಾಗಿ ವೆಚ್ಚವನ್ನು ಕಡಿಮೆ ಮಾಡಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಮೋದಿ ಘೋಷಿಸಿಕೊಂಡಿದ್ದಾರೆ. ಆದರೆ ದೇಶಾದ್ಯಂತವಿರುವ ರೈತ ಸಂಸ್ಥೆಗಳು ಕಚ್ಚಾವಸ್ತುಗಳಾದ ಗೊಬ್ಬರ, ಬೀಜ ಮತ್ತು ವಿದ್ಯುತ್ ದರ ನಿಧಾನವಾಗಿ ಮೇಲಕ್ಕೇರುತ್ತಿದೆ ಎಂದು ದೂರಿಕೊಂಡಿದ್ದಾರೆ. ಇನ್ನು ಕನಿಷ್ಠ ಬೆಂಬಲ ಬೆಲೆಯು ಹಣದುಬ್ಬರಕ್ಕೆ ತಕ್ಕಂತೆಯಾದರೂ ಏರುತ್ತಿಲ್ಲ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.
ಹಲವು ಬಾರಿ ಮೋದಿಯ ಆಶಾವಾದ ಅವರ ಸರಕಾರ ಎದುರಿಸುವ ಹಲವು ಗುರುತರ ಪ್ರಶ್ನೆಗಳನ್ನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ತಮ್ಮ ಭಾಷಣದಲ್ಲಿ ಮೋದಿ ದುರ್ಬಲ ಸಮುದಾಯಗಳ ಮೇಲೆ ಹೆಚ್ಚುತ್ತಿರುವ ಹಿಂಸಾಚಾರ ಘಟನೆಗಳ ಬಗ್ಗೆ ಮಾತನಾಡುತ್ತಾ ಎಷ್ಟೇ ಕಷ್ಟವಾದರೂ ಸಾಮಾಜಿಕ ಏಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳುತ್ತಾರೆ. ಅದರ ಹಿಂದಿನ ದಿನವೇ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ದೇಶದಲ್ಲಿ ಹೆಚ್ಚುತ್ತಿರುವ ದುರ್ಬಲ ಸಮುದಾಯಗಳ ಮೇಲಿನ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಜಾಗೃತ ಹಿಂಸೆಯನ್ನು ತಡೆಯಲು ಸರಕಾರ ಏನು ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಬಗ್ಗೆ ಪ್ರಧಾನಿಯವರು ಹೆಚ್ಚು ಏನೂ ಹೇಳಲೇ ಇಲ್ಲ. ಇನ್ನು ಸಂಘಪರಿವಾರದ ಅಂಗಗಳಾದ ವಿಎಚ್‌ಪಿ ಮುಂತಾದವುಗಳಿಗೆ ಅವಮಾನವಾದೀತು ಎಂಬ ಯೋಚನೆಯಿಂದ ಮೋದಿ ‘ಸಮಾಜ ವಿರೋಧಿ’ ಎಂಬ ಶಬ್ದವನ್ನು ಈ ಬಾರಿ ಪುನರುಚ್ಚರಿಸಲಿಲ್ಲ.
ಪಾಕಿಸ್ತಾನಕ್ಕೆ ಚಾಟಿ ಬೀಸುವ ಸಲುವಾಗಿ ಬಲೂಚಿಸ್ತಾನ ಮತ್ತು ಗಿಲ್ಗಿಟ್ ಸೇರಿದಂತೆ ಪಾಕ್ ಆಕ್ರಮಿತ ಕಾಶ್ಮೀರದ ಜನರು ತೋರಿಸಿರುವ ಪ್ರೀತಿಗೆ ಮತ್ತು ಕಳುಹಿಸಿರುವ ಶುಭಾಶಯ ಪತ್ರಗಳನ್ನು ನೋಡಿ ಆಶ್ಚರ್ಯವಾಗಿದೆ ಎಂದು ಮೋದಿ ತಿಳಿಸಿದ್ದರು. ನಂತರ ಕೆಲವು ಸರಕಾರಿ ಅಧಿಕಾರಿಗಳು, ಪ್ರಧಾನಿಯವರು ತಾವು ಟ್ವಿಟರ್‌ನಲ್ಲಿ ಸ್ವೀಕರಿಸಿದಂತಹ ಸಂದೇಶಗಳ ಬಗ್ಗೆ ಮಾತನಾಡಿದ್ದರು ಎಂಬುದನ್ನು ಸ್ಪಷ್ಟಪಡಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕೆಟ್ಟ ಹಿಂಸಾಚಾರದಲ್ಲಿ ತೊಡಗಿರುವ ಕಾಶ್ಮೀರದಿಂದ ಯಾವ ರೀತಿಯ ಸಂದೇಶಗಳನ್ನು ಸ್ವೀಕರಿಸಿದ್ದಾರೆ ಎಂಬ ಬಗ್ಗೆ ಮೋದಿ ಮೌನವಾಗಿದ್ದರು.
ದುರದೃಷ್ಟವಶಾತ್ ಮೋದಿಯ ಪ್ರಸಿದ್ಧ ಸಂಭಾಷಣಾ ಚಾತುರ್ಯವು ಒಂದೇ ರೀತಿಯ ಪಡಿಯಚ್ಚಿನಲ್ಲಿ ಸಾಗುತ್ತಿದ್ದು ಅದನ್ನು 2014ರ ಲೋಕಸಭಾ ಚುನಾವಣೆಯ ಮೊದಲು ಮತ್ತು ನಂತರ ಜನರನ್ನು ಹುರಿದುಂಬಿಸಿದ ಪ್ರಬಲ ಮಾತುಗಾರನ ವ್ಯಂಗ್ಯಚಿತ್ರಣವೆಂದಷ್ಟೇ ಬಣ್ಣಿಸಬಹುದು. ಎಲ್ಲಾ ರೀತಿಯ ವ್ಯಂಗ್ಯಚಿತ್ರಗಳು ಒಂದು ರೀತಿಯ ಅಸಂಬದ್ಧವಾದ ಮತ್ತು ಹಾಸ್ಯದ ಪರಿಣಾಮವನ್ನು ನೀಡುತ್ತವೆ. ಇದರಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬ ಬಗ್ಗೆ ಮೋದಿ ಗಂಭೀರವಾಗಿ ಚಿಂತಿಸಬೇಕಿದೆ.







