ಮರುಕಳಿಸಿದ ಹೆಜ್ಜೇನು ದಾಳಿ!
ಮಾನ್ಯರೆ,
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಸ್ಯಕಾಶಿ ಲಾಲ್ ಬಾಗ್‌ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಆಗಸ್ಟ್ 15 ಕೊನೆಯ ದಿನವಾಗಿದ್ದುದರಿಂದ ಸುಮಾರು ಹಲವು ಸಾವಿರ ಮಂದಿ ಪ್ರವಾಸಿಗರು ಫಲಪುಷ್ಪಪ್ರದರ್ಶನ ವೀಕ್ಷಣೆಗೆ ಬಂದಿದ್ದರು. ಇದೇ ವೇಳೆ ಹಾವೇರಿ ಮೂಲದ ಹನುಮಂತೇಗೌಡ ಹಾಗೂ ಶಿವರಾಜು ಎಂಬ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ಮಾಡಿ ಆಸ್ಪತ್ರೆ ಸೇರುವಂತೆ ಮಾಡಿವೆ.
ಕಳೆದ ವರ್ಷ ಆಗಸ್ಟ್ 15ರಂದು ಫಲಪುಷ್ಪವೀಕ್ಷಿಸಲು ಬಂದಿದ್ದ ಏಳು ವರ್ಷದ ಹೆಣ್ಣುಮಗುವಿನ ಮೇಲೆ ಹೆಜ್ಜೇನುಗಳು ದಾಳಿ ಮಾಡಿದ್ದ ಪರಿಣಾಮ ಆ ಮಗು ಮೃತಪಟ್ಟಿತ್ತು. ಈ ದುರ್ಘಟನೆ ಮಾಸುವ ಮುನ್ನವೇ ಈಗ ಮತ್ತೆ ಹೆಜ್ಜೇನು ದಾಳಿ ಮಾಡಿದ್ದು ಲಾಲ್‌ಬಾಗ್ ವೀಕ್ಷಿಸಲು ಬರುವ ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿವೆ. ಲಾಲ್ ಬಾಗ್‌ಸಸ್ಯತೋಟದಲ್ಲಿ 150ಕ್ಕೂ ಅಧಿಕ ಮರಗಳಲ್ಲಿ ಹೆಜ್ಜೇನುಗಳ ಗೂಡುಗಳಿದ್ದು ಮೇಲಿಂದ ಮೇಲೆ ಇಂಥ ದುರ್ಘಟನೆಗಳು ಸಂಭವಿಸುತ್ತಿವೆ.
ಆದ್ದರಿಂದ ಲಾಲ್‌ಬಾಗ್ ಸಸ್ಯತೋಟಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಲಾಲ್ ಬಾಗ್ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಹೆಜ್ಜೇನುಗಳಿಂದ ತೊಂದರೆ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು.





