ಗೋ ರಕ್ಷಕರ ವೇಷದಲ್ಲಿ ಬಂದ ನರಹಂತಕರು

ಈ ದೇಶದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಬೀದಿ ಗೂಂಡಾಗಿರಿ ನಡೆಸಿರುವ, ಕಂಡವರನ್ನು ಕೊಚ್ಚಿ ಕೊಲೆ ಮಾಡುತ್ತಿರುವ ಕೋಮುವಾದಿ ಸಂಘಟನೆಗಳ ಕ್ರಿಮಿನಲ್‌ಗಳಿಗೆ ಕಡಿವಾಣ ಹಾಕುವ ಕಾಲ ಬಂದಿದೆ. ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ಪ್ರವೀಣ್ ಪೂಜಾರಿ ಎಂಬ ಬಿಜೆಪಿ ಕಾರ್ಯಕರ್ತನನ್ನು ಹಿಂದೂ ಜಾಗರಣ ವೇದಿಕೆಯ ಹಂತಕರು ಕೊಲೆ ಮಾಡಿದ್ದಾರೆ. ದನ ಸಾಗಾಟದ ಆರೋಪ ಹೊರಿಸಿ ಆತನನ್ನು ಕೊಚ್ಚಿ ಹಾಕಿದ್ದಾರೆ. ಇದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಪ್ರಕ್ಷುಬ್ಧಗೊಂಡಿದೆ. ಈ ಹಿಂದೆ ಪಾಟಾಳಿ ಕೃಷ್ಣಯ್ಯ ಹಾಗೂ ಹರೀಶ್ ಪೂಜಾರಿಯನ್ನು ಇದೇ ರೀತಿ ಕೊಲೆ ಮಾಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿ ಇದ್ದರೂ ಜನಾಂಗ ದ್ವೇಷವನ್ನೇ ಮೈತುಂಬಾ ತುಂಬಿಕೊಂಡ ಕರಾವಳಿಯ ಪೊಲೀಸ್ ಇಲಾಖೆ ಗೃಹಸಚಿವರ ನಿಯಂತ್ರಣದಲ್ಲಿ ಇದ್ದಂತೆ ಕಾಣುತ್ತಿಲ್ಲ. ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರ ಮೇಲೆ ನಡೆಯುತ್ತಿರುವ ಹಲ್ಲೆ ಕೊಲೆಗಳು ಇತ್ತೀಚೆಗೆ ತೀವ್ರಗೊಂಡಿವೆ. ಈಗಾಗಲೇ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಜಯಪುರದಲ್ಲಿ ದನ ಸಾಗಾಟದ ಆರೋಪ ಹೊರಿಸಿ ದಲಿತ ಯುವಕರ ಮೇಲೆ ಇದೇ ಸಂಘಟನೆಗೆ ಸೇರಿದ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಈಗ ಕರಾವಳಿಯಲ್ಲಿ ಕೊಲೆಯನ್ನೇ ಮಾಡಿದ್ದಾರೆ. ಆದರೂ ಈ ದುಷ್ಕೃತ್ಯಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲಗೊಂಡಿದೆ.
ಕ್ರಿಮಿನಲ್‌ಗಳು ಯಾರೆಂದು ಗೊತ್ತಿದ್ದರೂ ಅವರ ಮೇಲೆ ಕ್ರಮಕೈಗೊಳ್ಳುತ್ತಿಲ್ಲ. ಹಿಂದೂ ಸಂಘಟನೆಯ ಹೆಸರನ್ನು ಇಟ್ಟುಕೊಂಡಿರುವ ಪುರೋಹಿತಶಾಹಿ ಸಂಘಟನೆಗಳು ಈವರೆಗೆ ಕರಾವಳಿಯಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿ ಇಟ್ಟುಕೊಂಡು ದೈಹಿಕವಾಗಿ ದಾಳಿ ನಡೆಸುತ್ತಿದ್ದವು. ಇದೀಗ ಈ ಸಂಘಟನೆಗಳ ಕಣ್ಣು ದಲಿತ ಮತ್ತು ಹಿಂದುಳಿದ ಸಮುದಾಯಗಳ ಮೇಲೆ ಬಿದ್ದಿವೆ. ಕಳೆದ ಒಂದೆರಡು ತಿಂಗಳುಗಳಿಂದ ದಲಿತ ಮತ್ತು ಹಿಂದುಳಿದ ಸಮುದಾಯಗಳ ಯುವಕರೇ ಅವರ ದುಷ್ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ. ಗುಜರಾತ್, ರಾಜಸ್ತಾನಗಳಲ್ಲಿ ಇಂತಹ ದುಷ್ಕೃತ್ಯಗಳ ವಿರುದ್ಧ ಅಲ್ಲಿನ ದಲಿತ ಸಮುದಾಯ ಬಂಡೆದ್ದಿದೆ. ಇದೀಗ ಕರ್ನಾಟಕದಲ್ಲಿ ಈ ನೀಚ ಕೃತ್ಯಗಳ ವಿರುದ್ಧ ದಲಿತ ಮತ್ತು ಹಿಂದುಳಿದ ಸಮುದಾಯಗಳಲ್ಲಿ ಆಕ್ರೋಶ ಮಡುಗಟ್ಟಿದೆ. ಗೋರಕ್ಷಕರ ಸೋಗು ಹಾಕಿಕೊಂಡು ಬರುವ ಗೋಳ್ವಾಲ್ಕರ್‌ವಾದಿಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲು ಹಾಕುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಗೋರಕ್ಷಕರನ್ನು ಕಟುವಾಗಿ ಟೀಕಿಸಿದ್ದರು. ಈ ಗೋರಕ್ಷಕರು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ಆಕ್ಷೇಪಿಸಿದ್ದರು. ಆದರೆ, ಅವರ ಈ ಆಕ್ಷೇಪ ಪ್ರಾಮಾಣಿಕವಾಗಿ ಇಲ್ಲವೆಂದು ಉತ್ತರಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಕಾಟಾಚಾರದ ಹೇಳಿಕೆಯನ್ನು ನೀಡುತ್ತಿದ್ದಾರೆಂದು ಬಿಎಸ್ಪಿ ನಾಯಕ ಮಾಯಾವತಿ ಟೀಕಿಸಿದ್ದರು.
ಪ್ರಧಾನಿಯ ಮೊಸಳೆ ಕಣ್ಣೀರಿನ ಹೇಳಿಕೆಗೂ ವಿಶ್ವಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಪ್ರವೀಣ್ ತೊಗಾಡಿಯಾ ಆಕ್ಷೇಪವೆತ್ತಿದ್ದರು. ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕ ವ್ಯಕ್ತಿಗಳನ್ನು ಕೊಲ್ಲುವ ಹಂತಕರನ್ನು ನಿಗ್ರಹಿಸುವಲ್ಲಿ ಪ್ರಧಾನಿ ಹೇಳಿಕೆ ಯಾವ ಪ್ರಯೋಜನವನ್ನೂ ಉಂಟು ಮಾಡಿರಲಿಲ್ಲ. ಈ ರೀತಿಯ ಕಾಟಾಚಾರದ ಹೇಳಿಕೆ ನೀಡುವ ಬದಲಾಗಿ, ಇಂತಹ ನರಹಂತಕ ಸಂಘಟನೆಗಳ ಮೇಲೆ ನಿಗಾವಹಿಸಿ ಅವುಗಳನ್ನು ನಿಗ್ರಹಿಸುವಲ್ಲಿ ಪ್ರಧಾನಿ ಆಸಕ್ತಿ ತೋರಿಸ ಬೇಕಾಗಿತ್ತು. ಆದರೆ, ಸ್ವತಃ ಮೋದಿ ಅವರೇ ಅಂತಹ ಸಂಘಟನೆಯ ಹಿನ್ನೆಲೆಯಿಂದ ಬಂದಿರುವುದರಿಂದ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ಮೇಲೂ ಆರೋಪಗಳು ಕೇಳಿಬಂದಿದ್ದವು. ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳನ್ನು ಕ್ರಿಮಿನಲ್‌ಗಳೆಂದು ಟೀಕಿಸುವ ಬದಲಾಗಿ ಇಂತಹ ಕ್ರಿಮಿನಲ್‌ಗಳ ಸೃಷ್ಟಿಗೆ ಕಾರಣವಾಗಿರುವ ಸಿದ್ಧಾಂತವನ್ನು ವಿರೋಧಿಸಬೇಕಾಗಿದೆ. ಹಿಟ್ಲರ್‌ನಿಂದ ಎರವಲು ಪಡೆದುಕೊಂಡು ಬಂದ ಈ ಸಿದ್ಧಾಂತವನ್ನು ಈ ದೇಶದಿಂದ ತೊಲಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇಂದಿನ ಕೇಂದ್ರ ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ಇಷ್ಟೆಲ್ಲ ಕೊಲೆಗಡುಕ ಕೃತ್ಯಗಳನ್ನು ನಡೆಸಿರುವ ಸಂಘಟನೆಗಳು ತಮ್ಮ ಪಾತಕ ಕೃತ್ಯಗಳನ್ನು ಮುಚ್ಚಿಕೊಳ್ಳಲು ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾದ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಘಟನೆಯ ವಿಚಾರಗೋಷ್ಠಿಯ ಬಗ್ಗೆ ವಿವಾದವನ್ನು ಸೃಷ್ಟಿಸಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸಿವೆ. ಈ ಹಿಂದೆ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕನ್ಹಯ್ಯಾ ಕುಮಾರ್ ಮುಂತಾದವರ ಮೇಲೆ ಹಲ್ಲೆ ಮಾಡಿ ಕುತಂತ್ರದಿಂದ ಜೈಲಿಗೆ ಕಳುಹಿಸಿದ್ದ ಎಬಿವಿಪಿಯಂತಹ ಸಮಾಜವಿರೋಧಿ ಸಂಘಟನೆಗಳು ಕರ್ನಾಟಕದಲ್ಲೂ ಸಕ್ರಿಯವಾಗಿವೆ. ದುರಂತವೆಂದರೆ ರಾಜ್ಯದ ಕಾಂಗ್ರೆಸ್ ಸರಕಾರ ಇಂತಹ ದೇಶವಿರೋಧಿ ಸಂಘಟನೆಗಳಿಂದ ದೂರು ಸ್ವೀಕರಿಸಿ ಮಾನವ ಹಕ್ಕು ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಕರ್ನಾಟಕದ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕ್ರಿಮಿನಲ್ ಚಟುವಟಿಕೆ ನಡೆಸಿರುವ ಎಬಿವಿಪಿಯಂತಹ ದೇಶದ್ರೋಹಿ ಸಂಘಟನೆಗಳ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದ ಗೃಹ ಸಚಿವರು ಆಸಕ್ತಿ ವಹಿಸಬೇಕಾಗಿದೆ. ಆದರೆ, ವಿಷಾದದ ಸಂಗತಿ ಎಂದರೆ ಗೃಹ ಸಚಿವರ ಊರಿನಲ್ಲೇ ಕನ್ಹಯ್ಯಿ ಕುಮಾರ್ ಅವರನ್ನು ಬೆಂಬಲಿಸಿ ಕರಪತ್ರಗಳನ್ನು ವಿತರಿಸಿದ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರು ಮೊಕದ್ದಮೆ ಹಾಕಿದ್ದರು. ಇನ್ನೂ ಆ ಮೊಕದ್ದಮೆಯನ್ನು ವಾಪಸ್ ಪಡೆಯಲು ಸಾಧ್ಯವಾಗಲಿಲ್ಲ. ಅದೇನೇ ಇರಲಿ ಪದೇ ಪದೇ ಗೋ ರಕ್ಷಣೆಯ ನೆಪದಲ್ಲಿ ಅರಾಜಕತೆಯನ್ನು ಉಂಟುಮಾಡುತ್ತಿರುವ ಕ್ರಿಮಿನಲ್ ಚಟುವಟಿಕೆಗಳನ್ನು ಹತ್ತಿಕ್ಕಬೇಕಾಗಿದೆ. ಮುಂಚೆ ಹಲ್ಲೆಗೆ ಮಾತ್ರ ಸೀಮಿತವಾಗಿದ್ದ ಈ ದಾಳಿಗಳು ಈಗ ಹತ್ಯೆಗಳಲ್ಲಿ ಪರ್ಯಾವಸನಗೊಳ್ಳುತ್ತಿವೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿರುವುದು ಇದರಿಂದ ಸ್ಪಷ್ಟವಾಗಿದೆ. ಜನಸಾಮಾನ್ಯರೇ ತಮ್ಮ ರಕ್ಷಣೆಗಾಗಿ ಸ್ವಯಂರಕ್ಷಣಾ ಪಡೆಗಳನ್ನು ಈಗ ಕಟ್ಟಿಕೊಳ್ಳಬೇಕಾಗಿದೆ. ಇಂತಹ ವಿಷಯದಲ್ಲಿ ಸರಕಾರವನ್ನು ನಂಬಿಕೊಂಡು ಕೂತರೆ ಸಾಲದು. ಕಾಂಗ್ರೆಸ್, ಜೆಡಿಎಸ್‌ನಂತಹ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳು ಒಂದಾಗಿ ಇಂತಹ ದುಷ್ಟ ಸಂಘಟನೆಗಳನ್ನು ಹತ್ತಿಕ್ಕಬೇಕಾಗಿದೆ. ಈ ಹಿಂದೆ ಬಳ್ಳಾರಿಯಲ್ಲಿ ಗಣಿರೆಡ್ಡಿಗಳು ತಮ್ಮದೇ ಸಾಮ್ರಾಜ್ಯ ನಿರ್ಮಿಸಿಕೊಂಡಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್‌ರಂಥವರು ತಮ್ಮದೇ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡು ಅಮಾಯಕರ ಮೇಲೆ ಹಲ್ಲೆಗೆ ಪ್ರಚೋದಿಸುತ್ತಿದ್ದಾರೆ. ಗಲಭೆಗೆ ಪ್ರಚೋದಿಸುವ ಹಿಂದೂ ಜಾಗರಣ ವೇದಿಕೆಯಂತಹ ಸಂಘಟನೆಗಳನ್ನು ನಿಷೇಧಿಸಿ ಈ ಸಂಘಟನೆಯ ಪದಾಧಿಕಾರಿಗಳನ್ನು ರಾಜ್ಯದಿಂದ ಗಡಿಪಾರು ಮಾಡುವುದು ತುರ್ತು ಅಗತ್ಯವಾಗಿದೆ.







