ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಪಾದ ವಡೇರ ಶ್ರೀಗಳಿಗೆ ಅಭಿನಂದನೆ

ಮಂಗಳೂರು, ಆ. 18: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಸುವರ್ಣ ಚತುರ್ಮಾಸದ ಪ್ರಯುಕ್ತ ಗುರುವಾರ ಮಂಗಳೂರಿನ ಗೋಕರ್ಣ ಮಠದಲ್ಲಿ ಸ್ವಾಮೀಜಿ ಅವರ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು , ಶ್ರೀಗಳು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರೀಗಳ ಆಶೀರ್ವಾದದಿಂದಲೇ ತಾನು ಇಂದು ಉನ್ನತ ಸ್ಥಾನಕ್ಕೇರಿದ್ದೇನೆ ಎಂದರು.
ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ್ ನಾಯ್ಕ್ ಮಾತನಾಡಿ, ಯುವಜನರಲ್ಲಿ ರಾಷ್ಟ್ರಪ್ರೇಮವನ್ನು ಬೆಸುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಗಳು ಸಹಕಾರಿ ಎಂದು ನುಡಿದರು.
ಬಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಜಿಎಸ್‌ಬಿ ಸಮಾಜ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಸಮಾಜದ ಯುವಕರು ಮುಂದೆ ಬರಬೇಕು ಎಂದು ಕರೆ ನೀಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ ಜೀವನದಲ್ಲಿ ಗುರುವಿನ ಸ್ಥಾನ ಮಹತ್ತರವಾದುದು. ಉತ್ತಮ ಜೀವನಕ್ಕೆ ಮಾರ್ಗದರ್ಶನ ನೀಡಲು ಗುರುವಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಜಿಎಸ್‌ಬಿ ಮಹಾರತ್ನ ಪ್ರಶಸ್ತಿ, ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಜಿಎಸ್‌ಬಿ ರತ್ನ ಪುರಸ್ಕಾರ, ಸೆಂಚುರಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ. ದಯಾನಂದ್ ಪೈ ಅವರಿಗೆ ಜಿಎಸ್‌ಬಿ ಮಹಾರತ್ನ ಪುರಸ್ಕಾರ, ಕೇಂದ್ರ ಆಯುಷ್ ಮತ್ತು ಆರೋಗ್ಯ ಇಲಾಖೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ಅವರಿಗೆ ಸಮಾಜ ರತ್ನ ಪ್ರಶಸ್ತಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆ ಅವರಿಗೆ ಸಮಾಜ ಮಹಾರತ್ನ ಪುರಸ್ಕಾರ, ಡೆಂಪೋ ಗ್ರೂಪ್‌ನ ಅಧ್ಯಕ್ಷ ಶ್ರೀನಿವಾಸ್ ಡೆಂಪೋ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ, ಸಲಗಾಂವಕರ ಗ್ರೂಪ್‌ನ ಅಧ್ಯಕ್ಷ ಶಿವಾನಂದ ಸಲಗಾಂವಕರ ಅವರಿಗೆ ಜಿಎಸ್‌ಬಿ ಉದ್ಯೋಗ ರತ್ನ ಪ್ರಶಸ್ತಿ ಪ್ರದಾನಿಸಲಾಯಿತು.
ಈ ಸಂದರ್ಭ ಅಂಚೆ ಇಲಾಖೆಯ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಉಷಾ ಚಂದ್ರಶೇಖರ, ವಿಶೇಷ ಅಂಚೆಚೀಟಿ ಹಾಗೂ ಅಂಚೆ ಕವರ್ ಬಿಡುಗಡೆ ಗೊಳಿಸಿದರು. ಉದ್ಯಮಿ ದಯಾನಂದ ಪೈ ಕುಟುಂಬದಿಂದ ಶ್ರೀಗಳಿಗೆ 50 ಪವನ್ ಚಿನ್ನವನ್ನು ನೀಡಲಾಯಿತು.







