ಸ್ವಾತಂತ್ರ ಹೋರಾಟಗಾರರ ಪಿಂಚಣಿ 5,000 ರೂಪಾಯಿ ಹೆಚ್ಚಳ
ಹೊಸದಿಲ್ಲಿ, ಆ.18: ಅಂಡಮಾನ್ನ ಭೂಗತ ಜೈಲಿನಲ್ಲಿ ಬಂಧಿಗಳಾಗಿದ್ದ ಸ್ವಾತಂತ್ರ ಹೋರಾಟಗಾರರಿಗೆ ನೀಡುತ್ತಿದ್ದ ಮಾಸಿಕ ಪಿಂಚಣಿಯನ್ನು ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರೋತ್ಸವ ಭಾಷಣದಲ್ಲಿ ಮಾಡಿದ ಘೋಷಣೆಗೆ ಅನುಗುಣವಾಗಿ 5 ಸಾವಿರ ರೂಪಾಯಿ ಹೆಚ್ಚಿಸಿ, 30 ಸಾವಿರಕ್ಕೆ ಏರಿಸಲಾಗಿದೆ.
ಅಂಡಮಾನ್ ಜೈಲಿನಲ್ಲಿ ರಾಜಕೀಯ ಕೈದಿಗಳಾಗಿದ್ದ ಸ್ವಾತಂತ್ರ ಯೋಧರು ಹಾಗೂ ಅವರ ಗಂಡ/ಹೆಂಡತಿಯ ಮಾಸಿಕ ಪಿಂಚಣಿಯನ್ನು 24,775 ರೂಪಾಯಿಯಿಂದ 30 ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಬ್ರಿಟಿಷ್ ಭಾರತದಿಂದ ಹೊರಗೆ ಕೈದಿಗಳಾಗಿದ್ದ ಸ್ವಾತಂತ್ರ ಹೋರಾಟಗಾರರ ಮಾಸಿಕ ಪಿಂಚಣಿಯನ್ನು 23,085 ರೂಪಾಯಿಗಳಿಂದ 28 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇಂಡಿಯನ್ ನ್ಯಾಷನಲ್ ಆರ್ಮಿ ಸದಸ್ಯರಾಗಿದ್ದ ಸ್ವಾತಂತ್ರ ಯೋಧರ ಪಿಂಚಣಿ 21,395 ರೂಪಾಯಿಗಳಿಂದ 26 ಸಾವಿರ ರೂಪಾಯಿಗೆ ಹೆಚ್ಚಿದೆ.
ಸ್ವಾತಂತ್ರ್ಯ ಯೋಧರ ಅವಲಂಬಿತರು ಹಾಗೂ ಅರ್ಹ ಹೆಣ್ಣುಮಕ್ಕಳಿಗೆ ನೀಡುತ್ತಿದ್ದ ನೆರವನ್ನು ಯೋಧರು ಪಡೆಯುತ್ತಿದ್ದ ಪಿಂಚಣಿಯ ಶೇಕಡ 50ಕ್ಕೆ ಹೆಚ್ಚಿಸಲಾಗಿದೆ. ದೇಶದಲ್ಲಿ ಸುಮಾರು 37 ಸಾವಿರ ಸ್ವಾತಂತ್ರ ಯೋಧರು ದೇಶದಲ್ಲಿದ್ದಾರೆ.