ಹಫೀಝ್ ಸಯೀದ್ ವಿರುದ್ಧ ಫತ್ವಾ
ಇಸ್ಲಾಮ್ ವಿರೋಧಿಯೆಂದು ಘೋಷಣೆ
ಬರೇಲಿ(ಉ.ಪ್ರ), ಆ.18: ಇಲ್ಲಿಯ ಬರೇಲ್ವಿ ಪಂಥದ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಸಂಸ್ಥೆಯು ಮುಂಬೈ ಭಯೋತ್ಪಾದಕ ದಾಳಿಗಳ ರೂವಾರಿ ಹಾಗೂ ಪಾಕಿಸ್ತಾನದ ಜಮಾಅತುದಅವಾದ ಮುಖ್ಯಸ್ಥ ಹಫೀಝ್ ಸಯೀದ್‌ನನ್ನು ಇಸ್ಲಾಮ್ ವಿರೋಧಿಯೆಂದು ಘೋಷಿಸಿ ಗುರುವಾರ ಆತನ ವಿರುದ್ಧ ಫತ್ವಾ ಹೊರಡಿಸಿದೆ.
ಸಂಸ್ಥೆಯ ಮುಖ್ಯಸ್ಥ ಮುಫ್ತಿ ಮುಹಮ್ಮದ್ ಸಲೀಂ ಬರೇಲ್ವಿ ಅವರು ಹೊರಡಿಸಿರುವ ಈ ಫತ್ವಾ ಹಫೀಝ್‌ನನ್ನು ಇಸ್ಲಾಮ್‌ನಿಂದ ಬಹಿಷ್ಕರಿಸಿದ್ದು, ಆತನನ್ನು ಅನುಸರಿಸುವುದು ಅಥವಾ ಆತನನ್ನು ಮುಸ್ಲಿಮ್ ಎಂದು ಪರಿಗಣಿಸುವುದು ‘ಕಾನೂನು ವಿರುದ್ಧ’ವಾಗುತ್ತದೆ ಎಂದು ಘೋಷಿಸಿದೆ. ಲಷ್ಕರೆ ತಯ್ಯಿಬಾದ ಸ್ಥಾಪಕನಾಗಿರುವ ಹಫೀಝ್ ತನ್ನ ತಲೆಯ ಮೇಲೆ 10 ಮಿ.ಅಮೆರಿಕನ್ ಡಾ.ಬಹುಮಾನ ಹೊತ್ತಿದ್ದಾನೆ.
ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರ, ಬಾಕಿ ಯುಳಿದಿರುವ ಆದೇಶವನ್ನು ಪಾಲಿಸಲು ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸುವಂತೆ ಪಾಕ್ ಸೇನೆಯ ಮುಖ್ಯಸ್ಥ ಜರಾಹಿಲ್ ಶರೀಫ್ ಅವರಿಗೆ ಸಯೀದ್ ಸೂಚಿಸಿರುವ ಬೆನ್ನಿಗೇ ಸೆಮಿನರಿಯ ಈ ತೀರ್ಪು ಹೊರಬಿದ್ದಿದೆ.
ದರ್ಗಾ ಅಲಾ ಹಝರತ್‌ನೊಂದಿಗೆ ಗುರುತಿಸಿಕೊಂಡಿರುವ ಮಂಝರ್-ಎ-ಇಸ್ಲಾಮ್ ಸೌದಾಗರನ್ ಜೈಪುರದ ನಿವಾಸಿ ಮುಹಮ್ಮದ್ ಮೊಯ್ನುದ್ದೀನ್ ಅವರ ಪ್ರಶ್ನೆಗೆ ಉತ್ತರವಾಗಿ ಈ ಫತ್ವಾ ಹೊರಡಿಸಿದೆ. ಇಸ್ಲಾಮಿಗೂ ಸಯೀದ್‌ಗೂ ಯಾವುದೇ ಸಂಬಂಧವಿಲ್ಲವೆಂದು ಅದು ಸ್ಪಷ್ಟಪಡಿಸಿದೆ.
ಅಲ್ಲಾಹ್ ಮತ್ತು ಪ್ರವಾದಿ ಮುಹಮ್ಮದರ ವಿರುದ್ಧ ಬರೆಯು ವವರನ್ನು ಮುಸ್ಲಿಮರೆಂದು ಸಯೀದ್ ಪರಿಗಣಿಸುತ್ತಿರುವುದಾಗಿ ಮೊಯ್ನುದ್ದೀನ್ ತನ್ನ ಪ್ರಶ್ನೆಯಲ್ಲಿ ಉಲ್ಲೇಖಿಸಿದ್ದರು. ಆತ ಧರ್ಮ ವಿರೋಧಿ ಸಿದ್ಧಾಂತ ಮತ್ತು ಅಭಿಪ್ರಾಯಗಳನ್ನ್ನು ಪ್ರಚುರ ಪಡಿಸುತ್ತಿದ್ದಾನೆ ಮತ್ತು ತನ್ಮೂಲಕ ಭೀತಿವಾದದಲ್ಲಿ ತೊಡಗುವಂತೆ ಜನರನ್ನು ಪ್ರಚೋದಿಸುತ್ತಿದ್ದಾನೆ ಎಂದೂ ಅವರು ಬೆಟ್ಟು ಮಾಡಿದ್ದರು. ಇಂತಹ ವ್ಯಕ್ತಿಯನ್ನು ಮುಸ್ಲಿಮನೆಂದು ಪರಿಗಣಿಸಬೇಕೇ ಎಂದವರು ಪ್ರಶ್ನಿಸಿದ್ದರು.





