ಉಡುಪಿ ಚಲೋ ಜಾಥಾಕ್ಕೆ ಚಿಂತನೆ: ಕೋಸೌವೇ
ಉಡುಪಿ, ಆ.18: ಜಿಲ್ಲೆಯ ಹೆಬ್ರಿ ಸಂತೆಕಟ್ಟೆಯಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ಪೂಜಾರಿಯನ್ನು ಕೊಂದು, ಆತನ ಜೊತೆಗಿದ್ದ ಇನ್ನೋರ್ವ ಅಕ್ಷಯ ಎಂಬಾತನಿಗೆ ಹಲ್ಲೆ ನಡೆಸಿರುವ ಪ್ರಕರಣವನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ತೀವ್ರವಾಗಿ ಖಂಡಿಸಿದೆ. ಈವರೆಗೆ ಮುಸ್ಲಿಮ್- ದಲಿತರ ಮೇಲೆ ಗೋವಿನ ಹೆಸರಲ್ಲಿ ಹಲ್ಲೆ ನಡೆಸುತ್ತಿದ್ದ ಸಂಘಪರಿವಾರದ ಕಾರ್ಯಕರ್ತರು ಇಂದು ಬಿಜೆಪಿಯ ಕಾರ್ಯಕರ್ತನನ್ನೇ ಬಲಿ ಪಡೆಯುವ ಮಟ್ಟಕ್ಕೆ ಬಂದಿವೆ. ಅಂದರೆ ಮುಸ್ಲಿಮ್- ದಲಿತರ ಬಳಿಕ ಈಗ ಹಿಂದುಳಿದ ವರ್ಗದವರನ್ನೂ ಬಲಿ ಪಡೆದುಕೊಳ್ಳುವ ಈ ನೀಚ ಗೋ ರಾಜಕೀಯದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವೇದಿಕೆ ಒತ್ತಾಯಿಸಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವೇದಿಕೆ, ಶೀಘ್ರದಲ್ಲೆ ಪ್ರಕರಣದ ಬಗ್ಗೆ ರಾಜ್ಯದ ವಿವಿಧ ಪ್ರಗತಿಪರ ಹಾಗೂ ಮಾನವ ಪರ ಎಡಪಂಥೀಯ ಸಂಘಟನೆಗಳನ್ನು ಮತ್ತು ಚಿಂತಕರನ್ನು ಒಂದುಗೂಡಿಸಿ ‘ಉಡುಪಿ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ನಡೆಸಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಕೇಂದ್ರ ಸಮಿತಿ, ಉಡುಪಿ ಜಿಲ್ಲಾ ಸಮಿತಿ ಹಾಗೂ ಉಡುಪಿ ಜಿಲ್ಲೆಯ ಸಹಭಾಗಿ ಸಂಘಟನೆಗಳು ಜಂಟಿಯಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ.





