ರಾಜ್ಯದಲ್ಲಿ ನರ್ಮ್ ಕಾಮಗಾರಿಗಳ ವೇಗಕ್ಕೆ ಹಿನ್ನಡೆ: ಸಚಿವ ಎಚ್.ಕೆ.ಪಾಟೀಲ್
ನರೇಗಾ ಕೂಲಿ ಬಿಡುಗಡೆ ಮಾಡದ ಕೇಂದ್ರ ಸರಕಾರ

ಬೆಂಗಳೂರು, ಆ.18: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ನರೇಗಾ)ಯಡಿ ಜು.2ರಿಂದ ಈವರೆಗೆ ಬಾಕಿ ಇರುವ 288.17 ಕೋಟಿ ರೂ. ಕೂಲಿ ಹಣವನ್ನು ಕೇಂದ್ರ ಸರಕಾರವು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಗತಿಪರಿಶೀಲನೆ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರಾಷ್ಟ್ರೀಯ ವಿದ್ಯುನ್ಮಾನ ನಿಧಿ ನಿರ್ವಹಣಾ ವ್ಯವಸ್ಥೆ(ಎನ್‌ಇಎಫ್‌ಎಂಎಸ್) ವೇದಿಕೆಯಲ್ಲಿ ಮುಂಗಡ ಹಣವನ್ನು ಠೇವಣಿ ಇರಿಸಲೂ ಭಾರತೀಯ ರಿಸರ್ವ್ ಬ್ಯಾಂಕ್ ಸಮ್ಮತಿಸಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನರೇಗಾದ ಕಾರ್ಯಚಟುವಟಿಕೆ ಗಳು ಹಾಗೂ ವೇಗಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ ಎಂದು ಅವರು ಹೇಳಿದರು. ಈ ಅಂಶವನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಮಂತ್ರಿಗೆ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದು ಬಾಕಿ ಕೂಲಿ 288 ಕೋಟಿ ರೂ. ಪಾವತಿಯ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಕೂಲಿ ಹಣ ಪಾವತಿಯಾಗದಿರುವ ಪರಿಣಾಮಗಳನ್ನು ಪರಾಮರ್ಶಿಸಿರುವ ರಾಜ್ಯ ಸರಕಾರವು ರಾಷ್ಟ್ರೀಯ ವಿದ್ಯುನ್ಮಾನ ನಿಧಿ ನಿರ್ವಹಣಾ ವ್ಯವಸ್ಥೆಯ ವೇದಿಕೆಯಿಂದ ತಾತ್ಕಾಲಿಕವಾಗಿ ಹಿಂದಕ್ಕೆ ಸರಿದು, ರಾಜ್ಯ ವಿದ್ಯುನ್ಮಾನ ನಿಧಿ ನಿರ್ವಹಣಾ ವ್ಯವಸ್ಥೆ( ಎಸ್ ಇಎಫ್‌ಎಂಎಸ್)ಗೆ ಮರು ಚಾಲನೆ ನೀಡಿ 200 ಕೋಟಿ ರೂ.ಠೇವಣಿ ಇರಿಸಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ವಿದ್ಯುನ್ಮಾನ ನಿಧಿ ನಿರ್ವಹಣಾ ವ್ಯವಸ್ಥೆಯ ವೇದಿಕೆಯಿಂದ ಹೊರಬಂದು ರಾಜ್ಯ ವಿದ್ಯುನ್ಮಾನ ನಿಧಿ ನಿರ್ವಹಣಾ ವ್ಯವಸ್ಥೆ ಪ್ರಾರಂಭಿಸಿದ ದಿನದವರೆಗೆ 60 ಕೋಟಿ ರೂ. ಕೂಲಿ ಪಾವತಿಯಾಗಿದೆ. ಅಂತೆಯೇ, ಪ್ರಸಕ್ತ ಸಾಲಿನಲ್ಲಿ ಪ್ರಕ್ಷೇಪಿತ 6.07 ಕೋಟಿ ಮಾನವ ದಿನಗಳಿಗೆ ಪ್ರತಿಯಾಗಿ ಈವರೆಗೆ 3.5 ಕೋಟಿ ಮಾನವ ದಿನಗಳು ಸೃಜನೆಯಾಗಿದೆ ಎಂದು ಎಚ್.ಕೆ.ಪಾಟೀಲ್ ವಿವರಣೆ ನೀಡಿದರು.
ಶುದ್ಧ ನೀರಿನ ಘಟಕ ಸ್ಥಾಪನೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಜ್ಯ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ, ಸಹಕಾರಿ ಹಾಗೂ ಸರಕಾರೇತರ ಸಂಸ್ಥೆಗಳ ಮೂಲಕ ರಾಜ್ಯಾದ್ಯಂತ 7 ಸಾವಿರ ಶುದ್ಧ ನೀರು ಘಟಕಗಳ ಸ್ಥಾಪನೆಯನ್ನು ಸೆ.15ರೊಳಗೆ ಪೂರ್ಣಗೊಳಿಸಲಾಗುವುದು. ಈಗಾಗಲೆ 6,539 ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಬಯಲು ಬಹಿರ್ದೆಸೆ ಮುಕ್ತ ರಾಜ್ಯದ ಸಂಕಲ್ಪ: ಮಹಾತ್ಮಾ ಗಾಂಧಿಯವರ 150ನೆ ಹುಟ್ಟುಹಬ್ಬದ ಸಂದರ್ಭದಲ್ಲಿ ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಸರಕಾರ ಸಂಕಲ್ಪಮಾಡಿದೆ. ಇದಕ್ಕಾಗಿ ರಾಜ್ಯದ ಬೇಡಿಕೆ 1,856 ಕೋಟಿ ರೂ.ಗೆ ಪ್ರತಿಯಾಗಿ ಕೇಂದ್ರ ಸರಕಾರ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ 254 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಈ ಬಾಬ್ತಿಗಾಗಿ ರಾಜ್ಯ ಸರಕಾರ 346 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ರಾಜ್ಯದಲ್ಲಿ ಶೇ.64.79ರಷ್ಟು ವೈಯಕ್ತಿಕ ಶೌಚಾಲಯಗಳೇ ಇರಲಿಲ್ಲ. ಆದರೆ, ಕಳೆದ ಮೂರು ವರ್ಷಗಳ ತಮ್ಮ ಸರಕಾರದ ಅವಧಿಯಲ್ಲಿ ಶೇ.62ರಷ್ಟು ವೈಯುಕ್ತಿಕ ಶೌಚಾಲಯಗಳ ನಿರ್ಮಾಣವಾಗಿವೆ. ಮುಂದಿನ 18 ತಿಂಗಳಲ್ಲಿ ಉಳಿದ ಶೇ.32ರಷ್ಟು ಶೌಚಾಲಯಗಳ ನಿರ್ಮಾಣ ಮಾಡಲು ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನಲ್ಲಿ 12 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ರಾಜ್ಯ ಸರಕಾರದ ಈ ಯೋಜನೆಗೆ ಕೇಂದ್ರ ಸರಕಾರದ ತಾತ್ವಿಕ ಒಪ್ಪಿಗೆಯೂ ದೊರೆತಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೊಡಗು, ಕೊಪ್ಪಳ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳನ್ನಾಗಿ ಘೋಷಿಸಲಾಗುವುದು ಎಂದು ಸಚಿವರು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಅನುಮೋದಿತ ವಾಗಿರುವ ಕ್ರಿಯಾಯೋಜನೆ ಹಾಗೂ ನೀಲ ನಕ್ಷೆಗಳ ವಿವರಗಳನ್ನು ಒಳಗೊಂಡ ಪಂಚಾಯತ್ ತಂತ್ರಾಂಶವನ್ನು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಹುಟ್ಟುಹಬ್ಬವಾದ ಆ.20ರೊಳಗೆ ಅಳವಡಿಸಲಾಗುವುದು ಎಂದು ಎಚ್.ಕೆ. ಪಾಟೀಲ್ ತಿಳಿಸಿದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಲತಾ ಕೃಷ್ಣರಾವ್, ಅಧಿಕಾರಿಗಳಾದ ರಜನೀಶ್ ಗೋಯಲ್, ತುಷಾರ್ ಗಿರಿನಾಥ್, ಐಎಸ್‌ಎನ್ ಪ್ರಸಾದ್, ಡಾ. ನಾಗಾಂಬಿಕಾ ದೇವಿ, ವಿಪುಲ್ ಬನ್ಸಾಲ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







