ನಾಳೆ ಬಿ.ಎ.ಮೊಹಿದಿನ್‌ರಿಗೆ ಅರಸು ಪ್ರಶಸ್ತಿ ಪ್ರದಾನ
ಬೆಂಗಳೂರು, ಆ. 18: ದೇವರಾಜ ಅರಸುರ ತತ್ವ, ಸಿದ್ಧಾಂತ ಹಾಗೂ ಅವರ ಆದರ್ಶಗಳನ್ನು ಮೈಗೂಡಿಸಿ ಕೊಂಡಿರುವ ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಸಚಿವ ಬಿ.ಎ.ಮೊಹಿದಿನ್ ಅವರಿಗೆ ಪ್ರಸಕ್ತ ಸಾಲಿನ ‘ಡಿ.ದೇವರಾಜ ಅರಸು ಪ್ರಶಸ್ತಿ’ಯನ್ನು ಆ.20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿ ಗೌರವಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿಯು 2 ಲಕ್ಷ ರೂ.ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಅರಸು ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಅರಸು ಪ್ರಶಸ್ತಿಗೆ ಅರ್ಹ ವ್ಯಕ್ತಿ ಆಯ್ಕೆಗೆ ರಾಜ್ಯ ಸರಕಾರ ಡಾ.ಕೃಷ್ಣಮೂರ್ತಿ ಹನೂರು ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಮಾಜಿ ಸಚಿವ ಮೊಹಿದ್ದೀನ್ ಸೇರಿದಂತೆ ಒಟ್ಟು 7 ಮಂದಿ ಅರಸು ಪ್ರಶಸ್ತಿಗೆ ಅರ್ಹರಿದ್ದರು. ಆ ಪೈಕಿ ಸರ್ವಾನುಮತದಿಂದ ಮೊಹಿದ್ದೀನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಂಜನೇಯ ಹೇಳಿದರು.
ಅರಸು ತತ್ವಗಳನ್ನು ಅನುಷ್ಠಾನಕ್ಕೆ ತರಲು ಮೊಹಿದ್ದೀನ್ ಅವರು ತಮ್ಮದೆ ಆದ ಮಾರ್ಗದಲ್ಲಿ ಶ್ರಮಿಸುತ್ತಿದ್ದಾರೆ ಎಂದು ಆಂಜನೇಯ ಬಣ್ಣಿಸಿದರು.





