ಕ್ಯಾನ್ಸರ್ ಗೆದ್ದ 54 ವರ್ಷದ ಹಿರಿಯ ಈಗ ಒಲಿಂಪಿಕ್ ಚಿನ್ನ ಗೆದ್ದರು !
ಇವರ ಸಾಧನೆ ಎಲ್ಲರಿಗೂ ಸ್ಫೂರ್ತಿ

ರಿಯೋ ಡಿ ಜನೈರೋ, ಆ.19: ಅರ್ಜೆಂಟಿನಾದ ಸಾಂಟಿಯಾಗೋ ಲಾಂಗೆ ಅವರಿಗೆ ಒಲಿಂಪಿಕ್ಸ್‌ನಲ್ಲಿ ಸೈಲಿಂಗ್ ವಿಭಾಗದಲ್ಲಿ ಚಿನ್ನ ಗೆದ್ದ ಅತ್ಯಪೂರ್ವ ಕ್ಷಣವಾಗಿತ್ತು. ಐವತ್ತನಾಲ್ಕು ವರ್ಷದ ಅವರು ಒಲಿಂಪಿಕ್ ಚಿನ್ನ ಪಡೆದ ಅತ್ಯಂತ ಹಿರಿಯ ಕ್ರೀಡಾಳು ಎಂಬ ಹೆಮ್ಮೆ ಒಂದೆಡೆಯಾದರೆ, ಅವರು ಕ್ಯಾನ್ಸರ್ ಎಂಬ ಮಹಾಮಾರಿಯನ್ನೂ ಧೈರ್ಯದಿಂದ ಎದುರಿಸಿ ಗೆದ್ದವರೆಂಬುದು ಇನ್ನೊಂದು ಮಹತ್ವದ ವಿಚಾರವಾಗಿದೆ. ಒಲಿಂಪಿಕ್ ಚಿನ್ನದ ಪದಕ ಪಡೆದಾಗ ಅವರು ಸಂತಸದಲ್ಲಿ ಕಣ್ಣೀರು ಹರಿಸಿದ್ದರು.
ತಮ್ಮ ಆರನೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಲಾಂಗೆ ಚಿನ್ನ ಪಡೆಯುವುದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು. ‘‘ನಾನು ನನ್ನ ಪುತ್ರರ ರೇಸಿಂಗ್ ನೋಡಿದಂತೆ ಅವರು ಕೂಡ ನನ್ನ ರೇಸಿಂಗ್ ನೋಡಿದ್ದಾರೆ ಹಾಗೂ ಇಂದು ನನ್ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ’’ಎಂದು ಅವರು ಹೇಳಿದರು.
ಚಿನ್ನದ ಪದಕ ಪಡೆದ ಕೂಡಲೇ ಅಲ್ಲಿಂದ ಹೊರ ಜಿಗಿದ ಲಾಂಗೆ ತಮ್ಮ ಪುತ್ರರನ್ನು ಬಿಗಿದಪ್ಪಿದರು.
ಲಾಂಗೆ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇದೆಯೆಂದು ಕಳೆದ ವರ್ಷ ಪತ್ತೆಯಾಗಿತ್ತು, ನಂತರ ನಡೆದ ಶಸ್ತ್ರಕ್ರಿಯೆಯಲ್ಲಿ ಅವರ ಎಡ ಶ್ವಾಸಕೋಶವನ್ನು ತೆಗೆಯಲಾಗಿತ್ತು. ‘‘ನಾನು ಇಷ್ಟೊಂದು ಪ್ರಯಾಣ ಮಾಡದೇ ಇರುತ್ತಿದ್ದರೆ ಹಾಗೂ ನನಗೆ ಇಷ್ಟೊಂದು ಆಯಾಸವಾಗದೇ ಇರುತ್ತಿದ್ದರೆ ನನಗೆ ಈ ರೋಗ ಇರುವುದು ಪತ್ತೆಯಾಗುತ್ತಲೇ ಇರಲಿಲ್ಲ’’ಎಂದವರು ಹೇಳಿದರು.
ಈಗಾಗಲೇ ಎರಡು ಬಾರಿ ಒಲಿಂಪಿಕ್ ಕಂಚಿನ ಪದಕ ಪಡೆದಿದ್ದಾರೆ ಲಾಂಗೆ. ರಿಯೋ ಒಲಿಂಪಿಕ್ಸ್ ನಲ್ಲಿ ಲಾಂಗೆ ಹಾಗೂ ಸರೊಲಿ ಜೋಡಿ ಆಸ್ಟ್ರೇಲಿಯಾದ ಜೇಸನ್ ವಾಟರ್ ಹೌಸ್ ಮತ್ತು ಲಿಸಾ ಡಮಾನಿನ್ ಜೋಡಿಯಿಂದ ಒಂದು ಅಂಕವನ್ನು ಹೆಚ್ಚು ಪಡೆದು ಚಿನ್ನ ಬಾಚಿಕೊಂಡಿತು.







