ಕಾಶ್ಮೀರದಲ್ಲಿ 17 ಲಕ್ಷ ಪೆಲೆಟ್ ಗನ್ ಬಳಕೆ! - ಸಿಆರ್‌ಪಿಎಫ್ ಬಹಿರಂಗ

ಶ್ರೀನಗರ,ಆಗಸ್ಟ್ 19: ಜುಲೈ ಎಂಟರ ನಂತರ ಕಾಶ್ಮೀರದಲ್ಲಿ ಹದಿನೇಳು ಲಕ್ಷದಷ್ಟು ಪೆಲೆಟ್ ಗನ್ ಬಳಸಿರುವುದಾಗಿ ಸಿಆರ್‌ಪಿಎಫ್ ಬಹಿರಂಗಪಡಿಸಿದೆ. ಪೆಲೆಟ್‌ಗನ್ ಬಳಕೆ ನಿಷೇಧಿಸಬೇಕೆಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರವಾಗಿ ಜಮ್ಮುಕಾಶ್ಮೀರ ಹೈಕೋರ್ಟ್‌ಗೆ ಅರೆಸೈನಿಕ ವಿಭಾಗ ಈ ದಿಗ್ಭ್ರಮೆ ಹುಟ್ಟಿಸುವ ಮಾಹಿತಿ ಒಳಗೊಂಡಿರುವ ಅಫಿದಾವಿತ್ ಸಲ್ಲಿಸಿದೆ ಎಂದು ವರದಿಯೊಂದು ತಿಳಿಸಿದೆ.
ಪಾಯಿಂಟ್ 9 ನಂಬರ್‌ನ 450 ಲೋಹದ ಗುಂಡುಗಳಿರುವ 3765 ಗನ್‌ಗಳನ್ನು ಆಗಸ್ಟ್ ಹನ್ನೊಂದರವರೆಗೆ ಕಾಶ್ಮೀರದಲ್ಲಿ ಪ್ರಯೋಗಿಸಲಾಗಿದೆ ಎಂದು ಸಿಆರ್‌ಪಿಎಫ್ ಕೋರ್ಟಿಗೆ ತಿಳಿಸಿದೆ. ಆದರೆ ಸಂಘರ್ಷಗ್ರಸ್ತ ಪ್ರದೇಶಗಳ ಜನರ ಗುಂಪನ್ನು ಎದುರಿಸಲು ಸೂಚಿಸಲಾಗಿದ್ದ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸಲು ಸಾಧ್ಯವಾಗಿಲ್ಲ ಎಂದು ಈ ಅರೆಸೇನಾಪಡೆ ಕೋರ್ಟಿಗೆ ವಿವರಿಸಿದೆ. ಮಾರಕವೂ ಮಾರಕವಲ್ಲದ್ದೂ ಆದ 14 ರೀತಿಯ ಆಯುಧಗಳನ್ನು ಕಾಶ್ಮೀರದಲ್ಲಿ ಪ್ರಯೋಗಿಸಲಾಗಿದೆ. ಇದರಲ್ಲಿ ಗ್ರೆನೇಡ್, ಪೇಪರ್ ಬಾಲ್, ಸ್ಟೋನ್ ಗ್ರೆನೇಡ್, ವಿದ್ಯುತ್ ಶೆಲ್ ಮುಂತಾದವುಗಳನ್ನು ಬಳಸಲಾಗಿದ್ದು, 8650 ಅಶ್ರುವಾಯು ಶೆಲ್‌ಗಳು, 2671 ಪ್ಲಾಸ್ಟಿಕ್ ಪೆಲೆಟ್‌ಗನ್‌ಗಳನ್ನು ಉಪಯೋಗಿಸಲಾಗಿದೆ ಎಂದು ಸಿಆರ್‌ಪಿಎಫ್ ಕೋರ್ಟ್‌ಗೆ ತಿಳಿಸಿದೆ. ಪೆಲೆಟ್‌ಗನ್ ಅನಿಯಂತ್ರಿತವಾಗಿ ಬಳಸಿರುವ ಕುರಿತು ತನಿಖೆಗೆ ಕೇಂದ್ರ ಗೃಹಸಚಿವಾಲಯ ಸಮಿತಿಯೊಂದನ್ನು ರಚಿಸಿದೆ ಎಂದು ತಿಳಿದು ಬಂದಿದೆ.





