ಬದಲಾವಣೆಗೆ ತೆರೆದುಕೊಳ್ಳಿ: ಸಚಿವ ಸುರೇಶ್ ಪ್ರಭು
ವಿಶ್ವ ಕೊಂಕಣಿ ಕೇಂದ್ರದಿಂದ 3.5 ಕೋಟಿ ರೂ. ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು, ಆ.19: ವಿದ್ಯಾರ್ಥಿಗಳು ಕೇವಲ ಉನ್ನತ ಶಿಕ್ಷಣವನ್ನು ಪಡೆಯುವುದು ಮಾತ್ರವಲ್ಲ, ಜಗತ್ತಿನಲ್ಲಿ ಆಗುತ್ತಿರುವ ಆಧುನಿಕ ತಂತ್ರಜ್ಞಾನಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕು. ಬದಲಾವಣೆಯೊಂದಿಗೆ ನಾವು ಬದಲಾದಾಗ ಯಶಸ್ಸು ಕಾಣಲು ಸಾಧ್ಯ ಎಂದು ಕೇಂದ್ರದ ರೈಲ್ವೆ ಸಚಿವ ಸುರೇಶ್ ಪ್ರಭು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೊಂಕಣಿ ಮಾನ್ಯತಾ ದಿನವಾದ ಇಂದು ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ವಿಶ್ವ ಕೊಂಕಣಿ ಕೇಂದ್ರದ ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
ವಿದ್ಯಾರ್ಹತೆಯ ಜತೆಗೆ ಕೌಶಲ್ಯವೂ ಇದ್ದಲ್ಲಿ ಅವಕಾಶಗಳು ಲಭ್ಯವಾಗುತ್ತವೆ ಎಂದು ಹೇಳಿದ ಅವರು, ನಾವು ನಮ್ಮ ಮಾತೃಭಾಷೆಗೆ ಆದ್ಯತೆ ನೀಡಿದಾಗ ಸರ್ವತೋಮುಖ ಅಭಿವೃದ್ದಿಗೆ ಸಾಧ್ಯವಾಗುತ್ತದೆ ಎಂದರು. ಇತರ ಭಾಷೆಗಳನ್ನು ಕಲಿಯಬೇಕು. ಆದರೆ ಮಾತೃ ಭಾಷೆ ಬಹು ಮುಖ್ಯ. ಅದಿಲ್ಲದೆ ಯಾವುದೇ ರೀತಿಯ ಯಶಸ್ಸು ಕೂಡಾ ಅಪೂರ್ಣ. ಕೊಂಕಣಿ ಭಾಷೆಯು ವಿಶ್ವ ಮಾನ್ಯತೆಯನ್ನು ಪಡೆದಿದ್ದು, ಇದು ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿರದೆ, ಜಾತ್ಯತೀತ ಭಾಷೆಯಾಗಿದೆ ಎಂದು ಸಚಿವ ಸುರೇಶ್ ಪ್ರಭು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ವಿದ್ಯಾರ್ಥಿಗಳು ಶಿಕ್ಷಣದ ಜತೆಯಲ್ಲೇ ಸಾಮಾನ್ಯ ಜ್ಞಾನಕ್ಕೂ ಹೆಚ್ಚಿನ ಒತ್ತು ನೀಡಿದಾಗ ಮಾತ್ರವೇ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು. 21ನೆ ಶತಮಾನ ಸ್ಪರ್ಧೆಯ ಶತಮಾನವಾಗಿದ್ದು, ಇಲ್ಲಿ ಗುಣಮಟ್ಟದ ಕೌಶಲ್ಯಯುಕ್ತ ಶಿಕ್ಷಣವೇ ಮಹತ್ವಪೂರ್ಣದ್ದು. ಸಮುದಾಯವು ತಮಗೆ ನೀಡಿದ ವಿದ್ಯಾರ್ಥಿ ವೇತನದ ನೆರವು ಪಡೆದು ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವ ಜತೆಗೆ ಭವಿಷ್ಯದಲ್ಲಿ ತಾವು ಇನ್ನಷ್ಟು ವಿದ್ಯಾರ್ಥಿಗಳಿಗೆ ನೆರವಾಗಲು ಸಹಕರಿಸಬೇಕು ಎಂದು ಅವರು ಹೇಳಿದರು.
ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ಯೋಜನೆಯ ಮೂಲ ಪ್ರೇರಕ ಟಿ.ವಿ. ಮೋಹನದಾಸ ಪೈ ದಿಕ್ಸೂಚಿ ಭಾಷಣ ಮಾಡಿ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲ್ಯವಿರುವ ವಿದ್ಯಾವಂತ ಯುವ ಸಮುದಾಯದ ಭವಿಷ್ಯ ಉಜ್ವಲವಾಗಿದೆ. ವಿದ್ಯಾರ್ಥಿಗಳು ಜೀವನದಲ್ಲೊಂದು ಕನಸಿನೊಂದಿಗೆ ತಮ್ಮ ಜೀವನದ ಗುರಿ ತಲುಪುವ ಜತೆಗೆ ಕೊಂಕಣಿ ಭಾಷೆಯನ್ನೂ ಬೆಳೆಸಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ರ್ಯಾನ್ ಇಂಟರ್‌ನ್ಯಾಷನಲ್ ವಿದ್ಯಾ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಮೇಡಮ್ ಗ್ರೇಸ್ ಪಿಂಟೋ, ಉಮಾ ಸುರೇಶ್ ಪ್ರಭು, ಎಂ. ಜಗನ್ನಾಥ ಶೆಣೈ, ಬಸ್ತಿ ವಾಮನ ಶೈಣೈ ಮೊದಲಾದವರು ಉಪಸ್ಥಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಡಾ. ಪಿ. ದಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ಬಾಳಿಗ ಕಾರ್ಯಕ್ರಮ ನಿರೂಪಿಸಿದರು.
24 ಮಂದಿಗೆ ವಿದೇಶ ವ್ಯಾಸಂಗಕ್ಕೆ ತಲಾ 1 ಲಕ್ಷ ರೂ. ವಿದ್ಯಾರ್ಥಿ ವೇತನ
ಇಂದು ನಡೆದ ಕಾರ್ಯಕ್ರಮದಲ್ಲಿ 3.5 ಕೋಟಿ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ಇಂದು ವಿತರಿಸಲಾಯಿತು. ಇದರಲ್ಲಿ 24 ಮಂದಿಗೆ ವಿದೇಶ ವ್ಯಾಸಂಗಕ್ಕಾಗಿ ತಲಾ 1 ಲಕ್ಷ ರೂ.ಗಳ ವಿದ್ಯಾರ್ಥಿ ವೇತನವೂ ಸೇರಿದೆ. ಪ್ರಸಕ್ತ ವರ್ಷ 635 ಇಂಜಿನಿಯರಿಂಗ್ ಹಾಗೂ 50 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿ ರಾಮದಾಸ ಕಾಮತ್ ಯು. ಮಾಹಿತಿ ನೀಡಿದರು.
2010ರಲ್ಲಿ ಆರಂಭಗೊಂಡ ಈ ನಿಧಿಯಡಿ ಕಳೆದ ಆರು ವರ್ಷಗಳಲ್ಲಿ 11.64 ಕೋಟಿ ರೂ. ವೌಲ್ಯದ ವಿದ್ಯಾರ್ಥಿವೇತನವನ್ನು 11585 ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಪ್ರಸಕ್ತ ಸಾಲಿನ ವಿದ್ಯಾರ್ಥಿ ವೇತನ ಸೇರಿ, 12,000 ಫಲಾನುಭವಿಗಳಿಗೆ ಒಟ್ಟು 15 ಕೋಟಿ ರೂ.ಗಳನ್ನು ವಿಶ್ವ ಕೊಂಕಣಿ ಕೇಂದ್ರದಿಂದ ವಿತರಿಸಲಾಗಿದೆ ಎಂದು ಅವರು ಹೇಳಿದರು.







