ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಈ ಬಾರಿ ‘ಶ್ರೀಕೃಷ್ಣ ಗಾನ ವೈಭವ’
ಆ.24ರಂದು ಬೆಳಗ್ಗೆ 9ರಿಂದ ರಾತ್ರಿ 9ರವರಗೆ ಮಕ್ಕಳ ಉತ್ಸವ

ಮಂಗಳೂರು, ಆ.19: ಕದ್ರಿಯ ಮಂಜುನಾಥ ಕ್ಷೇತ್ರದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಆ. 24ರಂದು ನಡೆಯಲಿರುವ 33ನೆ ವರ್ಷದ ರಾಷ್ಟ್ರೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆ’ಯಲ್ಲಿ ಪ್ರಸಕ್ತ ವರ್ಷ ಶ್ರೀಕೃಷ್ಣ ಗಾನ ವೈಭವ ಸ್ಪರ್ಧೆ ಹೊಸ ಸೇರ್ಪಡೆಯಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹೊಸ ವಿಭಾಗ ಸೇರಿದಂತೆ ಒಟ್ಟು 27 ವಿಭಾಗಗಳಲ್ಲಿ ಈ ಬಾರಿ ಉತ್ಸವ ನಡೆಯಲಿದೆ ಎಂದರು.
ಮಕ್ಕಳಿಗಾಗಿ ಶ್ರೀಕೃಷ್ಣನಿಗೆ ಸಂಬಂಧಪಟ್ಟ ಜಾನಪದ, ಭಕ್ತಿಗೀತೆ, ಭಾವಗೀತೆಗಳ ಸಂಗೀತ ಸ್ಪರ್ಧೆ ಇದಾಗಿದ್ದು, ಶಿಶು, ಬಾಲ, ಕಿಶೋರ, ತರಣ ಹಾಗೂ ಮುಕ್ತ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಅವರು ಹೇಳಿದರು.
ಈ ಬಾರಿ ಬೆಳಗ್ಗೆ 9 ಗಂಟೆಗೆ ಶ್ರೀಕೃಷ್ಣ ವರ್ಣ ವೈಭವ ಚಿತ್ರಕಲಾ ಸ್ಪರ್ಧೆ ಹಾಗೂ 9:30ಕ್ಕೆ ಶ್ರೀಕೃಷ್ಣ ಗಾನ ವೈಭವ ಕಾರ್ಯಕ್ರಮದೊಂದಿಗೆ ಬೆಳಗ್ಗಿನಿಂದಲೇ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನದ ವೇಳೆಗೆ ಕಂದಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ, ಗೀತಾ ಕೃಷ್ಣ, ಯಕ್ಷಕೃಷ್ಣ, ರಾಧಾಕೃಷ್ಣ, ಯಶೋಧ ಕೃಷ್ಣ, ಶಂಖನಾದ, ಶಂಖ ಉದ್ಘೋಷ, ದೇವಕಿ ಕೃಷ್ಣ, ವಸುದೇವ ಕೃಷ್ಣ, ನಂದ ಗೋಕುಲ, ಬಾಲಕೃಷ್ಣ ರಸಪ್ರಶ್ನೆ, ಶ್ರೀಕೃಷ್ಣ ರಸಪ್ರಶ್ನೆ ಸ್ಪರ್ಧೆ, ಛಾಯಾಕೃಷ್ಣ ಮೊದಲಾದ ಶ್ರೀಕೃಷ್ಣ ವೇಷ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ಹೇಳಿದರು.
ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಪಂಚಲೋಹದ ಶ್ರೀಕೃಷ್ಣನ ವಿಗ್ರಹ ಸೇರಿದಂತೆ ಪ್ರೋತ್ಸಾಹಕರಿಂದ ನೀಡಲಾಗುವ ಉಡುಗೊರೆಗಳನ್ನು ನೀಡಲಾಗುವುದು. ಕಳೆದ ವರ್ಷ ಸುಮಾರು 2,000 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ಈ ಬಾರಿ 3,000 ಸ್ಪರ್ಧಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ರಸಪ್ರಶ್ನೆ ಸ್ಪರ್ಧಿಗಳಿಗೆ ಬಹುಮಾನ ಆಯ್ಕೆಯ ಅವಕಾಶ
ಶ್ರೀಕೃಷ್ಣ ರಸಪ್ರಶ್ನೆ-ಬಾಲಕೃಷ್ಣ ರಸಪ್ರಶ್ನೆ ಸ್ಪರ್ಧಿಗಳಿಗೆ ಬಹುಮಾನವಾರ್ಥವಾಗಿ ಸ್ಪರ್ಧಾ ವೇದಿಕೆಯಲ್ಲಿ ಇರಿಸಲಾಗುವ 150ಕ್ಕೂ ಅಧಿಕ ಪೂಜಾ ಹಾಗೂ ಸಾಂಸ್ಕೃತಿಕ ಪರಿಕರಗಳನ್ನು ಆಯ್ದುಕೊಳ್ಳುವ ಅವಕಾಶವಿರುತ್ತದೆ. ಕದ್ರಿ ದೇವಳದ ಆವರಣದಲ್ಲಿ ಸ್ಪರ್ಧೆ ನಡೆಯಲಿದ್ದು, ರಾತ್ರಿ 12 ಗಂಟೆಗೆ ಕೃಷ್ಣ ದೇವರಿಗೆ 12 ಬಗೆಯ ಉಂಡೆಗಳು, ಚಕ್ಕುಲಿ, ಕಡುಬು ಖಾದ್ಯಗಳನ್ನು ನೈವೇದ್ಯ ಮಾಡಿ ನೆರೆದ ಮಕ್ಕಳಿಗೆ ಪ್ರಸಾದ ರೂಪವಾಗಿ ಉಂಡೆ ಚಕ್ಕುಲಿ ವಿತರಿಸಲಾಗುವುದು. ಪಾಲಕರು ತಮ್ಮ ಮಕ್ಕಳಿಗೆ ಮನೆಗಳಲ್ಲಿ ಅಥವಾ ಇನ್ನಿತರ ಕಡೆಗಳಲ್ಲಿ ವೇಷ ಭೂಷಣ ಹಾಕಿಸಿ ಕರೆ ತರಬಹುದಾಗಿದೆ. ಯಾವುದೇ ಜಾತಿ ಮತ, ಧರ್ಮಗಳ ಬೇಧವಿಲ್ಲದೆ ಈ ಸ್ಪರ್ಧೆಯಲ್ಲಿ ಸಾರ್ವಜನಿಕರು ಭಾಗವಹಿಸಬಹುದು ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.
ಗೋಷ್ಠಿಯಲ್ಲಿ ಕದ್ರಿ ನವನೀತ ಶೆಟ್ಟಿ, ವಿಜಯಲಕ್ಷ್ಮಿ ಬಿ., ದಯಾನಂದ ಕಟೀಲು, ಕೆ.ಎಸ್. ಕಲ್ಲೂರಾಯ, ಸೇರಾಜೆ ಗೋಪಾಲಕೃಷ್ಣ ಭಟ್, ಜನಾರ್ದನ ಹಂದೆ, ನಾರಾಯಣ ಭಟ್, ಡಾ. ಹರಪ್ರಸಾದ್ ತುದಿಯಡ್ಕ, ರಘುನಾಥ, ಆನಂದ್ ಮೊದಲಾದವರು ಉಪಸ್ಥಿತರಿದ್ದರು.







