ಪುತ್ತೂರು: ಯುವತಿ ನಾಪತ್ತೆ; ಪೊಲೀಸರಿಗೆ ದೂರು

ಪುತ್ತೂರು, ಆ.19: ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮದ ನೆಹರು ನಗರದಲ್ಲಿರುವ ಖಾಸಗಿ ವಸತಿಗೃಹದ ನಿವಾಸಿಯಾಗಿದ್ದ ಹುನಗುಂದ ಮೂಲದ ಯುವತಿಯೊಬ್ಬಳು ನಾಪತ್ತೆಯಾಗಿದ್ದು ಈ ಬಗ್ಗೆ ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಪುತ್ತೂರಿನ ನೆಹರುನಗರದ ಮಾಸ್ಟರ್ ಪ್ಲಾನರಿಯಲ್ಲಿ ಉದ್ಯೋಗದಲ್ಲಿದ್ದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕ್ಯಾದಿಗೇರಿ ನಿವಾಸಿಯಾಗಿದ್ದು, ಪುತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ, ಮೈಲಾರಪ್ಪ ಎಂಬವರ ಪುತ್ರಿ ರೇಖಾ (17) ನಾಪತ್ತೆಯಾಗಿರುವ ಯುವತಿ.
ವಸತಿ ಗೃಹದಲ್ಲಿ ತಂದೆಯ ಜತೆ ವಾಸ್ತವ್ಯವಿದ್ದುಕೊಂಡು ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದ ರೇಖಾ ಕಳೆದ ಆ.8ರಂದು ಸಂಜೆ 6 ಗಂಟೆಯ ಬಳಿಕ ನಾಪತ್ತೆಯಾಗಿದ್ದು, ಇದೇ ವಸತಿಗೃಹ ಕಟ್ಟಡದಲ್ಲಿನ ಪಕ್ಕದ ಕೊಠಡಿಯಲ್ಲಿ ವಾಸ್ತವ್ಯವಿದ್ದ ಯುವಕನೋರ್ವ ಆಕೆಯನ್ನು ಅಪಹರಿಸಿರಬಹುದೆಂಬ ಸಂಶಯ ವ್ಯಕ್ತಪಡಿಸಿ ಮೈಲಾರಪ್ಪ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಣೆಯಾದ ಯುವತಿ 5.2 ಅಡಿ ಎತ್ತರ, ಸಾಮಾನ್ಯ ಶರೀರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತುಳು ಭಾಷೆ ಬಲ್ಲವಳಾಗಿದ್ದಾಳೆ. ನಾಪತ್ತೆಯಾದ ದಿನ ನೀಲಿ ಬಣ್ಣದ ಚೂಡಿದಾರ ಧರಿಸಿದ್ದಳು. ಈ ಯುವತಿಯು ಪತ್ತೆಯಾದಲ್ಲಿ ಪುತ್ತೂರು ನಗರ ಠಾಣೆಯ ಮೊ.ಸಂ.:9480805361 ಕ್ಕೆ ಇಲ್ಲವೇ ದೂ.ಸಂ.: 08251-230555, ಅಥವಾ ಮಂಗಳೂರು ಎಸ್ಪಿ ಕಚೇರಿ ದೂ.ಸಂ.: 0824-2220503 ಗೆ ಮಾಹಿತಿ ನೀಡುವಂತೆ ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.







