ಪ್ರವೀಣ್ ಪೂಜಾರಿ ಕೊಲೆಗೆ ಪ್ರಭಾಕರಭಟ್ಟ ಕಾರಣ: ಆರೋಪ
ಪ್ರಗತಿಪರ ಸಂಘಟನೆಗಳಿಂದ ಉಡುಪಿ ಚಲೋ

ಬೆಂಗಳೂರು, ಆ.19: ಉಡುಪಿಯಲ್ಲಿ ಹತ್ಯೆ ಮಾಡಲಾದ ಬಿಜೆಪಿ ಮುಖಂಡ ಪ್ರವೀಣ್ ಪೂಜಾರಿಯ ಕೊಲೆ ಹಿಂದೆ ಸಂಘಪರಿವಾರದ ಕಾರ್ಯಕರ್ತರ ಕೈವಾಡವಿದೆ ಎಂದು ಆರೋಪಿಸಿರುವ ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕೂಡಲೆ ಆರೋಪಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಕೆ.ಎಲ್.ಅಶೋಕ್, ಕಳೆದ 15 ವರ್ಷಗಳಿಂದಲೂ ದೇಶದಾದ್ಯಂತ ಸಂಘಪರಿವಾರದ ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ದಾಳಿ ನಡೆಸುತ್ತಿದ್ದಾರೆ. ಈಗ ಗೋ ರಕ್ಷಣೆ ಹೆಸರಿನಲ್ಲಿ ಅಮಾಯಕ ಮುಸ್ಲಿಮರ ಮೇಲೆ ಹಾಗೂ ದಲಿತರ ಮೇಲೆ ದಾಳಿಯನ್ನು ಆರಂಭಿಸಿದ್ದು, ಹಲವಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚಿಗೆ ಬಿಜೆಪಿ ಮುಖಂಡ ಪ್ರವೀಣ್ ಪೂಜಾರಿಯ ಕೊಲೆ ಪ್ರಕರಣದ ಹಿಂದೆ ಕರಾವಳಿಯ ಆರ್‌ಎಸ್‌ಎಸ್‌ನ ಪ್ರಮುಖ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಕೈವಾಡವಿದ್ದು, ಅವರನ್ನು ಬಂಧಿಸಿ ವಿಚಾರಣೆ ಮಾಡಬೇಕು. ಜೊತೆಗೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ರಾಜ್ಯದಲ್ಲಿ ಅಮಾಯಕರ ಮೇಲೆ ನಡೆಯುತ್ತಿರುವ ದಾಳಿಗಳು ನಿಲ್ಲುತ್ತವೆ ಹಾಗೂ ಸೌಹಾರ್ದತೆ ಬೆಳೆಯುತ್ತದೆ ಎಂದರು.
ಸಮಾಜದಲ್ಲಿ ಸಾಮರಸ್ಯದಿಂದ ಬದುಕಲಾಗುತ್ತಿದೆ. ಆದರೆ, ಗೋ ರಕ್ಷಣೆ ಹೆಸರಿನಲ್ಲಿ ಸೌಹಾರ್ದ ಸಹಬಾಳ್ವೆಯನ್ನು ಕದಡುವ ಹುನ್ನಾರವಿದ್ದು, ಅದಕ್ಕೆ ಬಿಜೆಪಿ ಬೆಂಬಲ ಸೂಚಿಸುತ್ತಿದೆ ಎಂದು ಆರೋಪಿಸಿದರು.
ಹೀಗಾಗಿ ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಹಲ್ಲೆ, ಹತ್ಯೆ ಮಾಡಲು ಮುಂದಾಗುತ್ತಿರುವ ಗೋ ರಕ್ಷಕರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡಿರುವ ಕೊಲೆಗಡುಕರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಎಲ್ಲ ಪ್ರಗತಿಪರ ಸಂಘಟನೆಗಳೊಂದಿಗೆ ಉಡುಪಿ ಚಲೋ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಮುಖಂಡರಾದ ಸೆಬಾಸ್ಟಿಯನ್, ರಾಬಿನ್ ಉಪಸ್ಥಿತರಿದ್ದರು.





