ಶೀಘ್ರದಲ್ಲಿಯೇ ಪೊಲೀಸ್ ನೇಮಕಾತಿ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಆ.19: ಶೀಘ್ರದಲ್ಲಿಯೇ ಪೊಲೀಸ್ ನೇಮಕಾತಿ ಆರಂಭವಾಗಲಿದ್ದು, ಪೊಲೀಸ್ ಇಲಾಖೆಗೆ ಒಟ್ಟು 19,600 ಸಿಬ್ಬಂದಿಯನ್ನು ವರ್ಷದ ಅಂತ್ಯದೊಳಗೆ ನೇಮಿಸಲಾಗುವುದೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ನಗರದ ಯಲಹಂಕದ ಸಶಸ್ತ್ರ ಪೊಲೀಸ್ ಶಾಲೆಯಲ್ಲಿ ಏರ್ಪಡಿದ್ದ ನಾಲ್ಕನೆ ತಂಡದ ಸಿವಿಲ್ ಪೊಲೀಸ್ ಪೇದೆಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈಗಾಗಲೇ ಪೊಲೀಸ್ ಇಲಾಖೆಯಲ್ಲಿ 25 ಸಾವಿರ ಖಾಲಿ ಹುದ್ದೆಗಳಿದ್ದು, ಅವುಗಳನ್ನು ಹಂತಹಂತವಾಗಿ ಭರ್ತಿ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ಪೊಲೀಸ್ ಇಲಾಖೆಯಲ್ಲಿ ನಿವೃತ್ತಿಯಾದ ಜಾಗಕ್ಕೆ ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆಯ ಅನುಮತಿಗಾಗಿ ಕಾಯಬೇಕಾಗಿತ್ತು ಎಂದು ಪರಮೇಶ್ವರ್ ಹೇಳಿದರು.
ಇದುವರೆಗೂ ನೇಮಕಾತಿ ಮಾಡಿಕೊಳ್ಳಲಾಗಿರುವ ಸಿಬ್ಬಂದಿಯಲ್ಲಿ 6 ಸಾವಿರ ಮಂದಿಗೆ ತರಬೇತಿ ನೀಡಲಾಗಿದೆ. ಇನ್ನೂ 2 ಸಾವಿರ ಜನ ತರಬೇತಿ ಪಡೆಯುತ್ತಿದ್ದು, ಇನ್ನುಳಿದಂತೆ 8 ಸಾವಿರ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಪೊಲೀಸ್ ಹುದ್ದೆ ಶ್ರೇಷ್ಠ ಹುದ್ದೆಯಾಗಿದ್ದು, ಸಮಾಜಕ್ಕೆ ಹಾಗೂ ದೇಶಕ್ಕೆ ಪೊಲೀಸರ ಕೊಡುಗೆ ಅಪಾರ. ಇತ್ತೀಚೆಗೆ ಮಹಿಳೆಯರು ಸೇರಿದಂತೆ, ಪದವೀಧರರೂ ಪೊಲೀಸ್ ಹುದ್ದೆಗೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ವಾರದ ರಜೆ: ಪೊಲೀಸ್ ಸಿಬ್ಬಂದಿ ಸಮಸ್ಯೆಯನ್ನು ಬಗೆಹರಿಸಲು ವಾರಕ್ಕೊಮ್ಮೆ ರಜೆ ನೀಡುವಂತೆ ಆದೇಶ ಹೊರಡಿಸಲಾಗಿದೆ. ಅದೇ ರೀತಿ, ಪೊಲೀಸರಿಗೆ ನೀಡುತ್ತಿದ್ದ ರೇಷನ್‌ನಲ್ಲಿ ಗುಣಮಟ್ಟವಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಆ ಹಣವನ್ನು ಪೊಲೀಸರ ಖಾತೆಗೆ ವರ್ಗಾವಣೆಗೊಳಿಸಲಾಗುತ್ತಿದೆ ಎಂದು ಪರಮೇಶ್ವರ್ ಹೇಳಿದರು.





