ಬಿಪಿಎಲ್ ಪಡಿತರರಿಗೆ ತಾಳೆಎಣ್ಣೆ ಜತೆ ಸೂರ್ಯಕಾಂತಿ ಎಣ್ಣೆ : ಸೆಪ್ಟೆಂಬರ್‌ನಿಂದ ಹೊಸ ಕಾರ್ಡ್‌ಗೆ ಅರ್ಜಿ
ಬೆಂಗಳೂರು, ಆ. 19: ಆಹಾರ ಧಾನ್ಯಗಳೊಂದಿಗೆ ಪ್ರಸ್ತುತ ವಿತರಿಸುತ್ತಿರುವ ಅಡುಗೆಎಣ್ಣೆ ಗುಣಮಟ್ಟದ ಪರೀಕ್ಷೆಗೆ ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ತಾಳೆಎಣ್ಣೆ ಜತೆ ಸೂರ್ಯ ಕಾಂತಿ ಎಣ್ಣೆಯನ್ನು ವಿತರಿಸಲಾಗುವುದು. ಹೆಚ್ಚುವರಿ ಮೊತ್ತವನ್ನು ಫಲಾನುಭವಿಗಳು ಭರಿಸಬೇಕು ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಪಿಎಲ್ ಪಡಿತರ ಚೀಟಿದಾರರಿಗೆ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿ ಮತ್ತು ತೊಗರಿಬೇಳೆ ವಿತರಿಸಲು ವಾರ್ಷಿಕ 1,800 ಕೋಟಿ ರೂ. ವೆಚ್ಚ ಆಗಲಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಡಿತರ ಚೀಟಿದಾರರಿಗೆ 1 ಕೆಜಿ ಅಕ್ಕಿ ಹಾಗೂ ತೊಗರಿಬೇಳೆ ನೀಡಲಾಗುವುದೆಂದು ಘೋಷಿಸಿದ್ದು, ಜನಪರ ಯೋಜನೆ ಅನುಷ್ಠಾನಕ್ಕೆ ಇಲಾಖೆ ಕ್ರಮ ವಹಿಸಲಿದೆ ಎಂದು ಸಚಿವರು ಹೇಳಿದರು.
ಹೆಚ್ಚುವರಿಯಾಗಿ 1 ಕೆಜಿ ಅಕ್ಕಿ ನೀಡಲು ಮಾಸಿಕ 120 ಕೋಟಿ ರೂ. ಹಾಗೂ ತೊಗರಿಬೇಳೆ ನೀಡಲು 30 ಕೋಟಿ ರೂ. ಸೇರಿ ವಾರ್ಷಿಕ 1,800 ಕೋಟಿ ರೂ.ಗಳಷ್ಟು ವೆಚ್ಚವಾಗಲಿದೆ ಎಂದು, ಕುಟುಂಬದ ಸದಸ್ಯರ ಸಂಖ್ಯೆ ಆಧರಿಸಿ ತೊಗರಿಬೇಳೆ ಎಷ್ಟು ಪ್ರಮಾಣದಲ್ಲಿ ನೀಡಬೇಕೆಂದು ತೀರ್ಮಾನಿಸಲಾಗುವುದು ಎಂದರು.
ಅಂಗವಿಕಲರಿಗೆ ವಿನಾಯ್ತಿ: ನಕಲಿ ಪಡಿತರ ಚೀಟಿ ಪತ್ತೆಗೆ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ‘ಕೂಪನ್ ವ್ಯವಸ್ಥೆ’ಯಿಂದ ಅಂಗವಿಕಲರು, ಹಿರಿಯ ನಾಗರಿಕರು, ಅಶಕ್ತರಿಗೆ ವಿನಾಯ್ತಿ ನೀಡಲಾಗುವುದು. ನ್ಯಾಯಬೆಲೆ ಅಂಗಡಿಗಳಿಂದ ಅಂತಹವರು ಪಟ್ಟಿಯನ್ನು ಪಡೆದು ಅವರ ಮನೆ ಬಾಗಿಲಿನಲ್ಲೆ ಕೂಪನ್ ವಿತರಿಸಲಾಗುವುದು ಎಂದರು.
ರಾಜ್ಯದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಕೂಪನ್‌ಅನ್ನು 12.58 ಲಕ್ಷಕ್ಕೂ ಹೆಚ್ಚು ಮಂದಿ ಪಡೆದಿದ್ದು, ಆ ಪೈಕಿ 10.70ಲಕ್ಷ ಮಂದಿ ಪಡಿತರ ಧಾನ್ಯಗಳನ್ನು ಪಡೆದಿದ್ದಾರೆ ಎಂದ ಅವರು, ಕೂಪನ್ ವ್ಯವಸ್ಥೆ ಶೇ.90ರಷ್ಟು ಯಶಸ್ವಿಯಾಗಿದೆ. ಕೂಪನ್ ದರವನ್ನು ಮುಂಬರುವ ದಿನಗಳಲ್ಲಿ 3ರಿಂದ 5 ರೂ.ಗಳಿಗೆ ಹೆಚ್ಚಳ ಮಾಡಲಾಗುವುದು ಎಂದರು.
ಗ್ರಾಪಂ, ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ: ಹೊಸ ಪಡಿತರ ಚೀಟಿ ವಿತರಣೆ ಕಾರ್ಯವನ್ನು ಸೆಪ್ಟೆಂಬರ್ ತಿಂಗಳಿನಿಂದ ಆರಂಭಿಸಲು ಉದ್ದೇಶಿಸಿದ್ದು, ಅರ್ಜಿ ಪರಿಶೀಲನೆ ಅಧಿಕಾರವನ್ನು ಗ್ರಾಪಂ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ವಹಿಸಲು ಚಿಂತನೆ ನಡೆಸಲಾಗಿದೆ ಎಂದರು.
ಈ ಸಂಬಂಧ ಗ್ರಾಮೀಣಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಹೊಸ ಮಾರ್ಗಸೂಚಿಯನ್ವಯ ಅರ್ಹರಿಗೆ ಪಡಿತರ ಚೀಟಿ ನೀಡಲು ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ಅನರ್ಹರನ್ನು ಕೈಬಿಡಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.