ರಾಜಕಾಲುವೆ ಹೆಸರಿನಲ್ಲಿ ಬಡಪಾಯಿಗಳ ಮನೆ ತೆರವು ಸರಿಯಲ್ಲ: ಎಚ್.ಡಿ. ಕುಮಾರಸ್ವಾಮಿ

ಹಾಸನ, ಆ.19: ರಾಜಕಾಲುವೆ ಹೆಸರಿನಲ್ಲಿ ಬಡಪಾಯಿಗಳ ಮನೆ ತೆರವು ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿ ಕಟ್ಟಲಾಗಿರುವ ಮನೆ, ಕಟ್ಟಡವನ್ನು ತೆರಮಗೊಳಿಸಲಾಗುತ್ತಿದೆ. ಆದರೇ ಮೊದಲು ಕೆರೆ ಒತ್ತುವರಿ ಮಾಡಿಕೊಂಡು ಕಟ್ಟಲಾಗಿರುವ ದೊಡ್ಡ ದೊಡ್ಡ ಕಟ್ಟಡವನ್ನು ತೆರವುಗೊಳಿಸಿ ನಂತರ ಸರಕಾರದ ಅನುಮತಿ ಪಡೆದು ಕಟ್ಟಲಾಗಿರುವ ಮನೆಯನ್ನು ತೆರವು ಮಾಡಲಿ. ಅಂತೆಯೇ ಭ್ರಷ್ಟ ಅಧಿಕಾರಿಗಳ ಬಗ್ಗೆ ಗಮನ ನೀಡಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಲಹೆ ನೀಡಿದರು.
ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ಅಮಾಯಕ ವಿದ್ಯಾರ್ಥಿಗಳ ಮೇಲೆ ಬಿಜೆಪಿ ಪಕ್ಷದ ಅಂಗ ಸಂಸ್ಥೆಯಲ್ಲೊಂದಾದ ಎಬಿವಿಪಿ ಸಂಘಟನೆ ಕಾರ್ಯಕರ್ತರು ಲಾಠಿ ಪ್ರಹಾರ ಮಾಡಿದ್ದಾರೆ. ಇಂತಹ ಪ್ರಚೋದನೆಗೆ ಯಾವ ವಿದ್ಯಾರ್ಥಿಗಳು ಬಲುಪಶುವಾಗಬಾರದು ಎಂದು ಆತಂಕ ವ್ಯಕ್ತಪಡಿಸಿದರು.
ಮಹದಾಯಿ ಯೋಜನೆಯ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಮಧ್ಯಂತರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಗೆ ಸಹಮತ ವ್ಯಕ್ತಪಡಿಸಿದ ಅವರು, ಸರ್ವ ಪಕ್ಷ ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ಪರಿಣಿತರೊಂದಿಗೆ ಸಲಹೆ ಪಡೆದು ಸಮರ್ಪಕವಾಗಿ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಲಾಗಿತ್ತು ಎಂದರು. ಪ್ರಧಾನಿ ನರೇಂದ್ರ ಮೋದಿ ಕೂಡ ಮದ್ಯ ಪ್ರವೇಶ ಮಾಡಿ ಅನ್ಯಾಯವಾಗಿರುವುದನ್ನು ಸರಿಪಡಿಸಿ ನೀರು ಬಿಡಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ರಾಜ್ಯದ ಸಿಎಂ ಸಿದ್ದರಾಮಯ್ಯ ಮೊದಲು ಅಹಿಂದಕ್ಕೆ ಹೆಚ್ಚಿನ ಒತ್ತು ನೀಡಿ ನಂತರ ಮುಖ್ಯಮಂತ್ರಿಯಾದ ಮೇಲೆ ಹಿಂದೆ ಸರಿದರು. ಆದರಂತೆ ಈಗ ಬಿಜೆಪಿ ಮುಖಂಡರಾದ ಈಶ್ವರಪ್ಪ ಕೂಡ ಸಂಘಟನೆ ಕಟ್ಟುವುದಾಗಿ ಮುಂದೆ ಬಂದಿರುವುದು ನಾಟಕೀಯವಾಗಿದೆ ಎಂದು ವ್ಯಂಗ್ಯವಾಡಿದರು.
ಕ್ಷೇತ್ರದ ಶಾಸಕರಾದ ಎಚ್.ಎಸ್. ಪ್ರಕಾಶ್ ಹಾಗೂ ಇತರೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.







